ಬಳ್ಳಾರಿ: ಮಹಾಮಾರಿ ಕೊರೊನಾ ನಿಯಂತ್ರಣದ ಸಲುವಾಗಿಯೇ ಜಿಲ್ಲಾ ಖನಿಜ ನಿಧಿಯನ್ನ ಸಮರ್ಪಕವಾಗಿ ಬಳಸಿಕೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ. ಆದರೆ, ಜಿಲ್ಲಾ ಖನಿಜ ನಿಧಿಯ ಅನುದಾನವನ್ನ ಹೇಗಾದ್ರೂ ಮಾಡಿ ತಂತಮ್ಮ ಜೇಬಿಗೆ ಹಾಕಿ ಕೊಳ್ಳಬೇಕೆಂಬ ಚಿಂತೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಇದ್ದಾರೆಯೇ ಎಂಬ ಅನುಮಾನ ಈಗ ಮೂಡ ತೊಡಗಿದೆ.
ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಬರುವ ಒಟ್ಟಾರೆಯಾಗಿ ವಾರ್ಷಿಕ ಆದಾಯದಲ್ಲಿ ಶೇಕಡಾ 10ರಷ್ಟು ಅನುದಾನವನ್ನ ಜಿಲ್ಲಾ ಖನಿಜ ನಿಧಿ ಹೆಸರಿನಡಿ ಮೀಸಲಿರಿಸಲಾಗಿದ್ದು, ಈವರೆಗೂ ಕೂಡ ಸಾವಿರಾರು ಕೋಟಿ ರೂ.ಗಳ ಅನುದಾನ ಸಂಗ್ರಹಗೊಂಡಿದೆ. ಈವರೆಗೂ ಸಂಗ್ರಹಗೊಂಡ ಅನುದಾನವನ್ನ ಶಿಕ್ಷಣ, ಆರೋಗ್ಯ ಮತ್ತು ಅಗತ್ಯ ಸೌಲಭ್ಯಗಳನ್ನ ಕಲ್ಪಿಸಲು ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಕಳೆದ ಬಾರಿಯ ಕೋವಿಡ್ ಸಂದರ್ಭದಲ್ಲೂ ಜಿಲ್ಲಾ ಖನಿಜ ನಿಧಿಯ ಅನುದಾನವನ್ನ ಅಂದಿನ ಜಿಲ್ಲಾಧಿಕಾರಿ ಆಗಿದ್ದ ಎಸ್.ಎಸ್.ನಕುಲ್ ಅವರು ಬಹಳ ಅಚ್ಚು ಕಟ್ಟಾಗಿ ಸದ್ಬಳಕೆ ಮಾಡಿಕೊಂಡಿದ್ದರು. ಅದರ ಲೆಕ್ಕ ಪತ್ರವನ್ನೂ ಆಡಿಟ್ ಮಾಡಿಸಿದ್ದರು. ಸಾರ್ವಜನಿಕರ ಮಾಹಿತಿಗಾಗಿ ಅದನ್ನ ತೆರೆದ ಪುಸ್ತಕದಂತೆ ಮಾಡಿದ್ದರು. ಆದರೆ, ಆ ಖನಿಜ ನಿಧಿಯ ಮೇಲೆ ಈ ಉಭಯ ಜಿಲ್ಲೆಗಳ ಜನಪ್ರತಿನಿಧಿಗಳ ವಕ್ರದೃಷ್ಠಿ ಕೂಡ ಬೀಳಲಾರದಂತೆ ಮಾಡಿದ್ದರು. ಆದರೆ, ಈ ಬಾರಿ ಮಾತ್ರ ಜಿಲ್ಲಾ ಉಸ್ತುವಾರಿ ಸಚಿವರದ್ದೇ ಕಾರುಬಾರು ಆಗಿದೆ.