ನವದೆಹಲಿ: ಇಡೀ ದೇಶವೇ ಕಾಯುತ್ತಿದ್ದ ಲೋಕ ಸಮರದ ಮಹಾಫಲಿತಾಂಶ ಹೊರಬಿದ್ದಿದ್ದು, ಎನ್ಡಿಎ ಮೈತ್ರಿಕೂಟ ನಿರಾಯಾಸವಾಗಿ ದೆಹಲಿ ಗದ್ದುಗೆಯತ್ತ ದಾಪುಗಾಲಿಟ್ಟಿದೆ.
ಮೇ ಭೀ ಚೌಕಿದಾರ್ ಎನ್ನುವ ಘೋಷವಾಕ್ಯವನ್ನೇ ಪ್ರಮುಖವಾಗಿ ಬಳಸಿಕೊಂಡಿದ್ದ ನರೇಂದ್ರ ಮೋದಿ, ತಮ್ಮ ಭಾಷಣಗಳಲ್ಲಿ ಇದನ್ನೇ ಹೈಲೈಟ್ ಮಾಡುತ್ತಾ ಸಾಗಿದ್ದರು. ಮೋದಿ ತಮ್ಮ ಟ್ವಿಟರ್ ಹೆಸರನ್ನು ಚೌಕಿದಾರ್ ನರೇಂದ್ರ ಮೋದಿ ಎಂದು ಬದಲಿಸಿಕೊಂಡಿದ್ದರು.
ಬಿಜೆಪಿ ನಾಯಕರು, ಕಾರ್ಯಕರ್ತರು ಹಾಗೂ ಮೋದಿ ಅಭಿಮಾನಿಗಳು ಸಹ ಇದನ್ನೇ ಅನುಸರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಚೌಕಿದಾರ್ ಎಂದು ಹೆಸರನ್ನು ಬದಲಾವಣೆ ಮಾಡಿಕೊಂಡಿದ್ದರು.
ಸದ್ಯ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಮೋದಿ ತಮ್ಮ ಎಲ್ಲ ನಾಯಕರು ಹಾಗೂ ಎಲ್ಲ ಕಾರ್ಯಕರ್ತರಿಗೆ ಚೌಕಿದಾರ್ ಎನ್ನುವ ಹೆಸರನ್ನು ತೆಗೆಯಲು ಸೂಚಿಸಿದ್ದಾರೆ. ಮೋದಿ ಈಗಾಗಲೇ ಚೌಕಿದಾರ್ ಎನ್ನುವುದನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ತೆಗೆದಿದ್ದಾರೆ.
ಸದ್ಯಕ್ಕೆ ಚೌಕಿದಾರ್ ಪದವನ್ನು ಟ್ವಿಟರ್ನಿಂದ ತೆಗೆಯುತ್ತಿದ್ದೇನೆ. ಆದರೆ ನನ್ನಲ್ಲಿ ಚೌಕಿದಾರ್ ಮನಸ್ಸು ಇರಲಿದೆ. ದೇಶದ ಜನರೆಲ್ಲರೂ ಚೌಕಿದಾರರಾಗಿ ದೇಶಕ್ಕಾಗಿ ದುಡಿದಿದ್ದೀರಿ. ಅದು ದೇಶವನ್ನು ಕಾಯುವ ಪ್ರಬಲ ಚಿಹ್ನೆ ಆಗಿದ್ದು, ಜಾತಿವಾದ, ಕೋಮುವಾದ, ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.