ಬೆಂಗಳೂರು: ಧಾರ್ಮಿಕ ದತ್ತಿ ವ್ಯಾಪ್ತಿಗೆ ಬರುವ ರಾಜ್ಯದ ಎಲ್ಲ ದೇಗುಲಗಳನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಮುಜರಾಯಿ ಇಲಾಖೆ ಮುಂದಾಗಿದೆ. ಈ ಸಂಬಂಧ ಕಟ್ಟುನಿಟ್ಟಾಗಿ ರಾಜ್ಯದ ಎಲ್ಲ ದೇಗುಲಗಳಲ್ಲಿ ಸ್ವಚ್ಛ ಮಂದಿರ ಅಭಿಯಾನ ಯೋಜನೆಯನ್ನು ಯಶ್ವಸಿಯಾಗಿ ಅನುಷ್ಠಾನ ಮಾಡುವಂತೆ ಸೂಚಿಸಲಾಗಿದೆ.
ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನ ತಗೊಂಡು ಹೋದೀರಾ ಜೋಕೆ.. ಧಾರ್ಮಿಕ ದತ್ತಿ ಇಲಾಖೆ ದಂಡ ಹಾಕುತ್ತೆ
ರಾಜ್ಯದ ಎಲ್ಲಾ ಮುಖ್ಯ ದೇಗುಲಗಳಲ್ಲಿ ಸ್ವಚ್ಛ ಮಂದಿರ ಅಭಿಯಾನ ಯೋಜನೆಯನ್ನು ಯಶ್ವಸಿಯಾಗಿ ಅನುಷ್ಠಾನ ಮಾಡುವಂತೆ ಮುಜರಾಯಿ ಇಲಾಖೆ ಸೂಚಿಸಿದೆ.
2014 ರ ನವೆಂಬರ್ ತಿಂಗಳಲ್ಲಿ ಪ್ರಾಯೋಗಿಕವಾಗಿ ಬೆಂಗಳೂರು ನಗರ ವಲಯದಲ್ಲಿ ಸ್ವಚ್ಛ ಮಂದಿರ ಅಭಿಯಾನವನ್ನು ಚಾಲನೆ ಗೊಳಿಸಲಾಗಿತ್ತು. ಇದರಲ್ಲಿ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದು ಯಶಸ್ವಿಯಾಗಿದೆ. ಈ ಯಶಸ್ವಿಯಿಂದ ಪ್ರೇರಣೆಗೊಂಡು ಇಲಾಖೆಯು ಇಡೀ ರಾಜ್ಯದಲ್ಲಿ ಸ್ವಚ್ಛ ಅಭಿಯಾನ ಅನುಷ್ಠಾನಗೊಳಿಸಲು ಮುಂದಾಗಿದೆ. ಇದರಲ್ಲಿ ಮುಖ್ಯವಾಗಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳನ್ನು ಪ್ಲಾಸ್ಟಿಕ್ ಮುಕ್ತ ದೇವಾಲಯವನ್ನಾಗಿ ಮಾರ್ಪಡಿಸುವುದು ಮುಖ್ಯ ಉದ್ದೇಶವಾಗಿದೆ.
ದೇವಸ್ಥಾನಗಳಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯವನ್ನು ದೇವಾಲಯದ ಮಟ್ಟದಲ್ಲಿಯೇ ನಿರ್ವಹಣೆ ಅಥವಾ ಸ್ವಯಂ ವಿಲೇವಾರಿ ಮಾಡುವುದು. ಕಲ್ಯಾಣಿಗಳನ್ನು ಪುನರುಜ್ಜೀವನಗೊಳಿಸುವುದು ಜೊತೆಗೆ ದೇವಾಲಯಗಳಲ್ಲಿ ಜಾಗ ಇದ್ದ ಕಡೆ ಕಳೆಯನ್ನು ಸ್ವಚ್ಛಗೊಳಿಸಿ ಹೂವಿನ ಗಿಡಗಳನ್ನು ನಡೆಸಿ ಉದ್ಯಾನವನ ಮಾಡುವುದು. ಈ ಸಂಬಂಧ ದೇವಾಲಯಗಳ ಒಳಗಡೆ ಯಾವುದೇ ಭಕ್ತರು ಪ್ಲಾಸ್ಟಿಕ್ ಚೀಲ/ ಬಾಟಲ್ಗಳನ್ನ ಆವರಣಕ್ಕೆ ತರದಂತೆ ಸೂಚನಾ ಫಲಕವನ್ನ ಹಾಕುವಂತೆ ತಿಳಿಸಲಾಗಿದೆ. ಇನ್ನು ಮುಂದೆ ಏನಾದರೂ ದೇಗುಲಗಳಿಗೆ ಹೋಗುವಾಗ ಪ್ಲಾಸ್ಟಿಕ್ ಕವರ್ನಲ್ಲಿ ಪೂಜಾ ಸಾಮಾನು ತೆಗೆದುಕೊಂಡು ಹೋದರೆ, ದಂಡ ನಿಮ್ಮ ಪಾಲಾಗುತ್ತೆ ಹುಷಾರು.