ಬಳ್ಳಾರಿ: ಕೊರ್ಲಗುಂದಿ ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಭರತರೆಡ್ಡಿ ಅಂದಾಜು 50 ಬೆಡ್ಗಳ ಕೋವಿಡ್ ಕೇರ್ ಸೆಂಟರ್ ಸ್ಥಾಪನೆಗೆ ಸಲ್ಲಿಸಿದ್ದ ಅರ್ಜಿಯನ್ನ ಜಿಲ್ಲಾಧಿಕಾರಿ ಪವನ್ ಕುಮಾರ ಮಾಲಪಾಟಿ ತಿರಸ್ಕರಿಸಿದ್ದು, ರಾಜಕೀಯ ತಿರುವು ಪಡೆದುಕೊಂಡಿದೆ.
ಈ ಸಂಬಂಧ ಮಾಧ್ಯಮ ಪ್ರಕಟಣೆಯನ್ನ ಹೊರಡಿಸಿರುವ ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಭರತರೆಡ್ಡಿ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಕೊರೊನಾ ಸಾಂಕ್ರಾಮಿಕ ರೋಗದಿಂದ ಜನರ ಬದುಕು ಏರುಪೇರಾಗುತ್ತಿದೆ ಎಂದು ಹೇಳಲು ನಾನು ದುಃಖಿಸುತ್ತೇನೆ. ನಾವೆಲ್ಲರೂ ಸೇರಿ ಈ ಸಾಂಕ್ರಾಮಿಕ ರೋಗವನ್ನು ಹಿಮ್ಮೆಟಿಸೋಣ ಮತ್ತು ನಮ್ಮ ಕೈಲಾದ ಮಟ್ಟಿಗೆ ಸೇವೆ ಮಾಡೋ ಮೂಲಕ ನಮ್ಮ ದೇಶವನ್ನು ಕಟ್ಟೋಣ. ನಮ್ಮ ಜಿಲ್ಲೆಯ ರೋಗಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ಮನೆಯಿಂದ ಆಸ್ಪತ್ರೆಗಳಿಗೆ ಸ್ಥಳಾಂತರಿಸುವಾಗ ತುರ್ತು ಆರೈಕೆಯ ಅಗತ್ಯವಿರುವ ಸಂದರ್ಭಗಳಲ್ಲಿ ಆಮ್ಲಜನಕ ಪೂರೈಕೆ ಸೇರಿದಂತೆ ಸಂಪೂರ್ಣ ಸುಸಜ್ಜಿತ ವೈದ್ಯಕೀಯ ಬಸ್ ಪ್ರಾರಂಭಿಸಲು ನನ್ನ ಆಸಕ್ತಿಯನ್ನು ವ್ಯಕ್ತಪಡಿಸಲು ಬಯಸುತ್ತೇನೆ ಎಂದರು.
ಬಳ್ಳಾರಿಯಲ್ಲಿ 50 ಹಾಸಿಗೆಗಳ ಆಸ್ಪತ್ರೆಯನ್ನ ನನ್ನ ಸ್ವಂತ ಖರ್ಚಿನಲ್ಲಿ ಸ್ಥಾಪಿಸುವ ನನ್ನ ಉಪಕ್ರಮದ ಬಗ್ಗೆ ನಾನು ನಿಮಗೆ ತಿಳಿಸಲು ಬಯಸುತ್ತೇನೆ. ನಾನು ಈ ಪ್ರಸ್ತಾಪವನ್ನ ಬಳ್ಳಾರಿ ಜಿಲ್ಲಾಧಿಕಾರಿಯವರ ಮುಂದೆ ಇಟ್ಟಿದ್ದೇನೆ. ಮತ್ತು ಅದನ್ನು ಕಡೆಗಣಿಸಲಾಗಿದೆ. ಏಕೆಂದರೆ ನಾನು ಒಬ್ಬ ಕಾಂಗ್ರೆಸ್ ಪಕ್ಷದವನು ಎಂದು. ಈ ಕಠಿಣ ಸನ್ನಿವೇಶಗಳ ಸಂದರ್ಭದಲ್ಲಿ ನಾವು ನಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನ ಬದಿಗಿಟ್ಟು ಜನರ ರಕ್ಷಣೆ ಮತ್ತು ಚೇತರಿಕೆಯತ್ತ ಗಮನ ಹರಿಸಬೇಕೆಂದು ನಾನು ವಿನಂತಿಸುತ್ತೇನೆ ಎಂದರು.
ಕೊರೊನಾ ಸಾಂಕ್ರಾಮಿಕ ರೋಗವನ್ನು ನಿವಾರಿಸಲು ಅನೇಕ ವ್ಯಕ್ತಿಗಳಿಗೆ ಅಗತ್ಯ ಆರೋಗ್ಯ ರಕ್ಷಣೆ ಮತ್ತು ಸರಿಯಾದ ವೈದ್ಯಕೀಯ ಚಿಕಿತ್ಸೆಯ ಕೊರತೆಯಿದೆ. ಇಂತಹ ಕಠಿಣ ಸಂದರ್ಭದಲ್ಲಿ ಯಾವ ರಾಜಕೀಯ ಪಕ್ಷಕ್ಕೆ ಸೇರಿದವರಾಗಿದ್ದರೂ ಸಹ ಅಗತ್ಯವಿರುವ ಜನರಿಗೆ ಸಹಾಯ ಮಾಡಲು ಜಿಲ್ಲಾಧಿಕಾರಿಗಳು ಅನುವು ಮಾಡಿಕೊಡಬೇಕು. ಆದರೆ ನಮ್ಮ ಜಿಲ್ಲಾಧಿಕಾರಿಗಳ ನಡೆ ಇತ್ತೀಚೆಗೆ ಪಕ್ಷಪಾತದಿಂದ ಕೂಡಿದೆ ಮತ್ತು ಅವರು ಬಿಜೆಪಿ ಪಕ್ಷದ ಸದಸ್ಯರಾಗಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆಂದು ಆರೋಪಿಸಿದರು.
ಬಳ್ಳಾರಿಯ ಹಿಂದಿನ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ರಾಜಕೀಯ ಹಿನ್ನೆಲೆಗಳನ್ನು ಲೆಕ್ಕಿಸದೆ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಿದ್ದರು. ಅಂತಹ ದಕ್ಷ ಅಧಿಕಾರಿಗಳು ಮತ್ತೆ ಬಳ್ಳಾರಿ ಜಿಲ್ಲೆಯಲ್ಲಿ ಅಧಿಕಾರ ವಹಿಸಿಕೊಳ್ಳಬೇಕೆಂದು ನಾನು ಕೋರುತ್ತೇನೆ. ಮೂಲಭೂತ ವೈದ್ಯಕೀಯ ಆರೈಕೆಯ ಕೊರತೆಯಿಂದಾಗಿ ನನ್ನ ಜನರು ಬಳಲುತ್ತಿದ್ದಾರೆ. ಇದನ್ನು ನೋಡಲು ನನಗೆ ತುಂಬಾ ದುಃಖವಾಗಿದೆ. ನಾನು ಬಳ್ಳಾರಿ ಜಿಲ್ಲೆಯ ನನ್ನ ಜನರಿಗೆ ಅತ್ಯುತ್ತಮ ವೈದ್ಯಕೀಯ ಆರೈಕೆಯನ್ನು ನೀಡಬೇಕಿದೆ ಮತ್ತು ನನ್ನ ಉಪಕ್ರಮವು ಮುಂದುವರಿಯುತ್ತದೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ. ಹಾಲಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಆರ್ಎಸ್ಎಸ್ನ ಕರ ಸೇವಕ್ ಆಗಬಾರದು. ಜನ ಸೇವಕ ಆಗಬೇಕೆಂದು ವಿನಮ್ರವಾಗಿ ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.