ಮ್ಯಾಂಚೆಸ್ಟರ್: ಐಸಿಸಿ ವಿಶ್ವಕಪ್ 2019ರ ಆವೃತ್ತಿಯಲ್ಲಿ ಹೈವೋಲ್ಟೇಜ್ ಕದನವಾಗಿರುವ ಇಂಡೋ-ಪಾಕ್ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹ್ಮದ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
ಭಾರತ ತಂಡದಲ್ಲಿ ಗಾಯಗೊಂಡಿರುವ ಆರಂಭಿಕ ಆಟಗಾರ ಶಿಖರ್ ಧವನ್ ಬದಲಿಗೆ ಆಲ್ರೌಂಡರ್ ವಿಜಯ್ ಶಂಕರ್ರಿಗೆ ಅವಕಾಶ ನೀಡಲಾಗಿದೆ.
ಪಾಕಿಸ್ತಾನದ ಪರ ಆಸಿಫ್ ಅಲಿ ಬದಲಿಗೆ ಆಲ್ರೌಂಡರ್ ಇಮಾದ್ ವಾಸಿಂ, ಶಾಹೀನ್ ಅಫ್ರಿದಿ ಬದಲಿಗೆ ಸ್ಪಿನ್ನರ್ ಶದಾಬ್ ಖಾನ್ ತಂಡ ಸೇರ್ಪಡೆಗೊಂಡಿದ್ದಾರೆ.
ಎರಡು ತಂಡಗಳ ಅಂಕಿ ಅಂಶವನ್ನು ನೋಡುವುದಾದರೆ ಭಾರತ ತಂಡ ವಿಶ್ವಕಪ್ನಲ್ಲಿ 6-0ಯಲ್ಲಿ ಮುಂದಿದೆ. ಆದರೆ ಏಕದಿನ ಕ್ರಿಕೆಟ್ನಲ್ಲಿ ಪಾಕಿಸ್ತಾನ 73 -54 ರಲ್ಲಿ ಮುನ್ನಡೆ ಸಾಧಿಸಿದೆ.
ವಿಶ್ವಕಪ್ನಲ್ಲಿ ಭಾರತ ತಂಡ ಒಟ್ಟು 77 ಪಂದ್ಯಗಳನ್ನಾಡಿದ್ದು, 48ರಲ್ಲಿ ಜಯ ಸಾಧಿಸಿ 27 ರಲ್ಲಿ ಸೋಲುಕಂಡಿದೆ. ಒಮ್ಮೆ ಟೈ ಆಗಿದೆ. 1983 ಹಾಗೂ 2011ರಲ್ಲಿ ಭಾರತ ತಂಡ ಚಾಂಪಿಯನ್ ಆಗಿದೆ. 2003 ರಲ್ಲಿ ರನ್ನರ್ ಅಪ್ ಆಗಿತ್ತು.