ಮೈಸೂರು: ಕೃಷ್ಣ ಅವರ ಬದುಕು ಮತ್ತು ರಾಜಕಾರಣ ಯುವ ಜನರಿಗೆ ಆದರ್ಶವಾಗಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಕೆ.ಆರ್ ಪೇಟೆ ಕೃಷ್ಣ ಅವರ ಬದುಕು ಯುವ ಜನರಿಗೆ ಆದರ್ಶ: ಸಿದ್ದರಾಮಯ್ಯ ಸಂತಾಪ ಸಲ್ಲಿಕೆ - Mysuru KR Pete krishna news
ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಅಂತಿಮ ದರ್ಶನ ಪಡೆದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕುಟುಂಬಕ್ಕೆ ಸಾಂತ್ವನ ಹೇಳಿದರು.
ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಅಂತಿಮ ದರ್ಶನ ಪಡೆದ ನಂತರ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ ಸಿದ್ದರಾಮಯ್ಯ, “ನಾನು ಮತ್ತು ಕೃಷ್ಣ ಒಟ್ಟಿಗೆ ವಕೀಲ ವೃತ್ತಿ ಆರಂಭಿಸಿದ್ದು, ಕೃಷ್ಣ ಅವರು ಕೆ.ಆರ್.ಪೇಟೆಗೆ ವಕೀಲ ವೃತ್ತಿ ಮಾಡಲು ಹೋದರು. ನಾನು ಮೈಸೂರಿನಲ್ಲೇ ಉಳಿದೆ. ಮೊದಲು ನಾನು ಶಾಸಕನಾದೆ. ನಂತರ ಕೃಷ್ಣ ಅವರು ಶಾಸಕರಾದರು. ಇಬ್ಬರದು ಒಂದೇ ಚಿಂತನೆ. ಕೃಷ್ಣ ಅವರ ಬದುಕು ಸರಳ ಹಾಗೂ ಸಜ್ಜನಿಕೆಯಿಂದ ಕೂಡಿತ್ತು. ಕೃಷ್ಣ ಅವರು ಭ್ರಷ್ಟಾಚಾರ ಮುಕ್ತ ರಾಜಕಾರಣವನ್ನು ಬಯಸಿದ್ದರು. ಆದರೆ, ಈಗಿನ ವ್ಯವಸ್ಥೆಗೆ ಅದು ಒಗ್ಗುವುದಿಲ್ಲ” ಎಂದರು.
“ಅವರು ಒಳ್ಳೆಯ ಸ್ನೇಹ ಜೀವಿಯಾಗಿದ್ದು ನಾವು ಒಬ್ಬ ಗಾಂಧಿವಾದಿಯನ್ನು ಕಳೆದುಕೊಂಡಿದ್ದೇವೆ. ಪ್ರತಿ ಬಾರಿ ಬೆಂಗಳೂರಿಗೆ ಬಂದಾಗ ನನ್ನನು ಭೇಟಿಯಾಗುತ್ತಿದ್ದರು. ಆದರೆ, ಕಳೆದ ಒಂದು ವರ್ಷದಿಂದ ನನ್ನನ್ನು ಭೇಟಿಯಾಗಿರಲಿಲ್ಲ. ಅವರಿಗೆ ಲಿವರ್ ಕ್ಯಾನ್ಸರ್ ಇದ್ದದ್ದು ನನಗೆ ಗೊತ್ತಿರಲಿಲ್ಲ. ಈಗಷ್ಟೇ ಗೊತ್ತಾಗಿದೆ. ಅವರ ನಿಧನ ನನಗೆ ತುಂಬಾ ನೋವಿನ ಸಂಗತಿ” ಎಂದು ಸಿದ್ದರಾಮಯ್ಯ ಹೇಳಿದರು.