ಮುಂಬೈ: ವಿಶ್ವ ಕ್ರಿಕೆಟ್ನ ದಂತಕತೆ ಸಚಿನ್ರ ಕನಸು, ಎಂ ಎಸ್ ಧೋನಿಯ ಚಾಣಾಕ್ಷ ನಾಯಕತ್ವ ಹಾಗೂ ಕ್ಯಾನ್ಸರ್ ನಡುವೆಯೂ ಅದ್ಭುತ ಆಲ್ರೌಂಡರ್ ಪ್ರದರ್ಶನ ನೀಡಿದ ಯುವರಾಜ್ ಸಿಂಗ್ರ ಶ್ರಮದ ಫಲವಾಗಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದು ಇಂದಿಗೆ 8 ವರ್ಷಗಳು ತುಂಬಿದೆ.
1983 ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಚೊಚ್ಚಲ ವಿಶ್ವಕಪ್ ಮುಡಿಗೇರಿಸಿಕೊಂಡಿದ್ದ ಭಾರತ ನಂತರ 4 ವಿಶ್ವಕಪ್ಗಳಲ್ಲಿ ಪೈನಲ್ ಕೂಡ ತಲುಪಲಿಲ್ಲ. ನಂತರ ದಾದಾ ನೇತೃತ್ವದ ಭಾರತ 2003ರಲ್ಲಿ ಫೈನಲ್ ತಲುಪಿ ಆಸ್ಟ್ರೇಲಿಯಾ ವಿರುದ್ಧ ಸೋಲುನಭವಿಸಿ ಮತ್ತೆ ನಿರಾಸೆಯನಿಭವಿಸಿತ್ತು.
2007 ರಲ್ಲಿ ಕಳಪೆ ಪ್ರದರ್ಶನದಿಂದ ಲೀಗ್ನಲ್ಲೇ ಹೊರಬಿದ್ದಿದ್ದ ಭಾರತ 2011 ರಲ್ಲಿ ತವರಿನಲ್ಲಿ ನಡೆಯುವ ವಿಶ್ವಕಪ್ ಗೆಲ್ಲಲೇಬೇಕೆಂಬ ಹಟದಿಂದ ತಂಡವನ್ನು ಅಂದಿನಿಂದಲೇ ಕಟ್ಟಲಾರಂಭಿಸಿತ್ತು.
2011 ರ ವೇಳೆಗಾಗಲೇ ಧೋನಿ ನಾಯಕತ್ವದಲ್ಲಿ ಭಾರತ ಬಲಿಷ್ಠ ತಂಡವಾಗಿ ರೂಪುಗೊಂಡು ಹಲವಾರು ತಂಡಗಳಿಗೆ ಸೋಲುಣಿಸಿ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿತ್ತು. 2011ರ ವಿಶ್ವಕಪ್ನಲ್ಲಿ ಭಾರತ ತಂಡ ಬಾಂಗ್ಲಾದೇಶ ಮಣಿಸುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಿತ್ತು. ಲೀಗ್ನಲ್ಲಿ ದಕ್ಷಿಣ ಆಪ್ರಿಕಾ ಮಾತ್ರ ಸೋಲನುಭವಿಸಿತ್ತು. ಕ್ವಾರ್ಟರ್ ಪೈನಲ್ನಲ್ಲಿ ಆಸ್ಟ್ರೇಲಿಯಾ, ಸೆಮಿಫೈನಲ್ನಲ್ಲಿ ಪಾಕಿಸ್ತಾನ ಹಾಗೂ ಫೈನಲ್ನಲ್ಲಿ ಶ್ರೀಲಂಕಾ ತಂಡವನ್ನು ಬಗ್ಗಬಡಿದು ವಿಶ್ವಕಪ್ ಬರ ನೀಗಿಸಿಕೊಂಡಿತ್ತು. ಎಲ್ಲದಕ್ಕೂ ಮಿಗಿಲಾಗಿ ಕ್ರಿಕೆಟ್ ಜಗತ್ತಿನಲ್ಲಿ ಬಹುಪಾಲು ಬ್ಯಾಟಿಂಗ್ ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದ ಸಚಿನ್ ಪಾಲಿಗೆ ಮರೀಚಿಕೆಯಾಗಿದ್ದ ವಿಶ್ವಕಪ್ ಅನ್ನು ಅಂದು ಧೋನಿ ನೇತೃತ್ವದ ಯಂಗ್ ಟೀಮ್ ಇಂಡಿಯಾ ಉಡುಗೊರೆಯಾಗಿ ನೀಡಿತ್ತು.
ತವರಿನ ಲಾಭ ಪಡೆದಿದ್ದ ಭಾರತ ಅಂತೂ ತನ್ನ 2ನೇ ವಿಶ್ವಕಪ್ ಗೆದ್ದು ಇಂದಿಗೆ 8 ವರ್ಷಗಳಾಗಿದೆ. ಮುಂದಿನ ತಿಂಗಳಿಂದ ಇಂಗ್ಲೆಂಡ್ನಲ್ಲಿ ಆರಂಭವಾಗಲಿರುವ 12 ನೇ ವಿಶ್ವಕಪ್ ಅನ್ನು ಕೊಹ್ಲಿ ನೇತೃತ್ವದ ಭಾರತ ತಂಡ ಗೆಲ್ಲಲಿ ಎಂಬುದು ಬಹುಪಾಲು ಭಾರತೀಯ ಕ್ರೀಡಾಭಿಮಾನಿಗಳ ಆಶಯವಾಗಿದೆ.
ಮುಂಬೈನ ವಾಂಖೆಡೆಯಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಶ್ರೀಲಂಕಾ ಜಯವರ್ಧನೆ (103) ಶತಕದ 274 ರನ್ಗಳಿಸಿತ್ತು. 275 ರನ್ ಗುರಿಯನ್ನ ಬೆನ್ನಟ್ಟಿದ್ದ ಭಾರತ ತಂಡ 48.2 ಓವರ್ಗಳಲ್ಲಿ 277 ರನ್ಗಳಿಸಿ 6 ವಿಕೆಟಗಳ ಜಯ ಸಾಧಿಸಿತ್ತು. ನಾಯಕ ಧೋನಿ 91 ಹಾಗೂ ಗಂಭೀರ್ 97 ರನ್ಗಳಿಸಿ ಗೆಲುವಿನ ರೂವಾರಿಗಳಾಗಿದ್ದರು.