ಗದಗ: ಕೊರೊನಾ ಅಬ್ಬರ ಎಲ್ಲವನ್ನು ತಲೆಕೆಳಗಾಗಿಸಿದೆ. ಅದೆಷ್ಟೋ ಕುಟುಂಬಗಳಿಗೆ ಆಸರೆಯಾಗಿದ್ದ ಚಿಕ್ಕಮಟ್ಟದ ಆರ್ಥಿಕ ಸಹಾಯವೂ ನಿಂತಿದೆ. ಅದರಲ್ಲೂ ವೃದ್ಧರಿಗೆ ಸರ್ಕಾರ ನೀಡುವ ವೃದ್ಧಾಪ್ಯ ವೇತನಕ್ಕೂ ಇದೀಗ ಬ್ರೇಕ್ ಬಿದ್ದಿದೆ. ಇದಕ್ಕೆಲ್ಲಾ ಒಂದೆಡೆ ಕೊರೊನಾ ಕಾರಣವಾದರೆ ಮತ್ತೊಂದೆಡೆ ತಾಂತ್ರಿಕ ದೋಷ ಎನ್ನಲಾಗುತ್ತಿದೆ.
ಕೊರೊನಾ ಹಿನ್ನೆಲೆ ಸುಮಾರು ಎರಡು ತಿಂಗಳುಗಳ ಕಾಲ ಲಾಕ್ಡೌನ್ ಜಾರಿಯಲ್ಲಿತ್ತು. ಈ ವೇಳೆ ಬಹುತೇಕ ಸರ್ಕಾರಿ ಕಚೇರಿಗಳ ಕಾರ್ಯ ಚಟುವಟಿಕೆಗಳು ತಮ್ಮ ಕೆಲಸ ನಿಲ್ಲಿಸಿದ್ದವು. ತುರ್ತು ಅವಶ್ಯಕ ಸೇವೆಗೆ ಅವಕಾಶ ಇದ್ದರೂ ಕೂಡ ಜನರು ಮಾತ್ರ ಯಾವುದಕ್ಕೂ ಹೊರಬಾರದ ಪರಿಸ್ಥಿತಿ ಇತ್ತು. ಅದರಲ್ಲೂ ವಯಸ್ಸಾದವರನ್ನು ಯಾರೂ ಸಹ ಹೊರಗೆ ಬಿಡ್ತಿರಲಿಲ್ಲ. ಇದರಿಂದ ಈಗ ಗದಗ ಜಿಲ್ಲೆಯಲ್ಲಿ ಇಂದು ಅಂಚೆ ಕಚೇರಿ ಬಳಿ ವೃದ್ಧರ ಸಮೂಹವೇ ನೆರೆದಿತ್ತು.
ಕೊರೊನಾ ನಡುವೆ ವೃದ್ಧರ ಪರದಾಟ ಕಳೆದ 9 ತಿಂಗಳಿಂದ ನಮಗೆ ವೃದ್ಧಾಪ್ಯ ವೇತನ ಬಂದಿಲ್ಲ ಅಂತ ಬಹುತೇಕ ವೃದ್ಧರು ತಮ್ಮ ನೋವು ತೋಡಿಕೊಂಡಿದ್ದಾರೆ. ಇನ್ನು, ಅಂಚೆ ಕಚೇರಿ ಸಿಬ್ಬಂದಿ ಯಾವುದಕ್ಕೂ ಸರಿಯಾಗಿ ಪ್ರತಿಕ್ರಿಯೆ ಕೊಡದೆ ಹಿರಿಯ ಜೀವಿಗಳನ್ನು ಮನೆಗೆ ವಾಪಸ್ ಕಳುಹಿಸುತ್ತಿದ್ದಾರೆ. ಸರ್ಕಾರ 60 ವರ್ಷ ಮೇಲ್ಪಟ್ಟವರಿಗೆ ಈ ವೃದ್ಧಾಪ್ಯ ವೇತನ ಯೋಜನೆ ಜಾರಿಗೊಳಿಸಿದೆ. ಕುಟುಂಬದಿಂದ ದೂರ ಉಳಿದ ಅದೆಷ್ಟೋ ವೃದ್ಧರು ಈ ವೃದ್ಧಾಪ್ಯ ವೇತನದ ಮೇಲೆ ಅವಲಂಬಿತರಾಗಿದ್ದಾರೆ.
ಮಾಸಿಕವಾಗಿ ಬರುವ ಸಾವಿರ ರೂಪಾಯಿಯೇ ಇವರ ಜೀವನಕ್ಕೆ ಆಧಾರವಾಗಿದೆ. ಆದರೆ, ಕಳೆದ 9 ತಿಂಗಳಿಂದ ಇವರಿಗೆ ಹಣ ಜಮೆಯಾಗಿಲ್ಲ ಅನ್ನೋದು ಇವರ ಅಳಲಾಗಿದೆ. ಇತ್ತೀಚಿನ ತಾಂತ್ರಿಕತೆಯ ಮಾಹಿತಿ ಇಲ್ಲದಿರುವ ಈ ಬಡ ವೃದ್ಧರಿಗೆ ಸದ್ಯ ತಮ್ಮ ವೇತನ ಯಾಕೆ ಜಮೆ ಆಗಿಲ್ಲಾ ಅನ್ನೋದೆ ದೊಡ್ಡ ತಲೆನೋವಾಗಿದೆ. ಆದರೆ, ಇದೆಲ್ಲವನ್ನೂ ಬಗೆಹರಿಸಿ ವೃದ್ಧರ ವೇತನವನ್ನು ಅವರ ಕೈಸೇರುವಂತೆ ಮಾಡಬೇಕಾಗಿರೋ ಅಧಿಕಾರಿ ವರ್ಗ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ.