ಬಸವಕಲ್ಯಾಣ:ತಾಲೂಕಿನ ಎರಡು ಪ್ರತ್ಯೇಕ ಗ್ರಾಮಗಳಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹದ ಕುರಿತು ಖಚಿತ ಮಾಹಿತಿ ಪಡೆದ ಅಧಿಕಾರಿಗಳ ತಂಡ ದಾಳಿ ನಡೆಸಿ ವಿವಾಹ ತಡೆಯುವಲ್ಲಿ ಯಶಸ್ವಿಯಾಗಿದೆ.
ತಾಲೂಕಿನ ಮುಚಳಂಬ ಗ್ರಾಮದಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿಗೆ 24 ವರ್ಷದ ಯುವಕನೊಂದಿಗೆ ವಿವಾಹ ನಿಶ್ಚಯಿಸಲಾಗಿತ್ತು. ಈ ಕುರಿತಂತೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳ ತಂಡ ವಿವಾಹಕ್ಕೂ ಮುನ್ನಾ ದಿನವೇ ಸ್ಥಳಕ್ಕೆ ಭೇಟಿ ನೀಡಿ ವಿವಾಹ ರದ್ದು ಮಾಡುವಂತೆ ಸೂಚಿಸಿತು.
ಇನ್ನು ತಾಲೂಕಿನ ವಡ್ಡರಗಾ ಗ್ರಾಮದಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಭಾಲ್ಕಿ ತಾಲೂಕಿನ 25 ವರ್ಷದ ಯುವಕನೊಂದಿಗೆ ನಡೆಸಲಾಗುತ್ತಿದ್ದ ವಿವಾಹ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡ ವಿವಾಹ ತಡೆಯುವಲ್ಲಿ ಯಶಸ್ವಿಯಾಯಿತು.
ಬಸವಕಲ್ಯಾಣದಲ್ಲಿ ಅಧಿಕಾರಿಗಳ ದಾಳಿ: ಎರಡು ಪ್ರತ್ಯೇಕ ಬಾಲ್ಯ ವಿವಾಹಕ್ಕೆ ಬ್ರೇಕ್ ಬಾಲಕಿ ಹಾಗೂ ಬಾಲಕರಿಗೆ ನಿಗದಿತ ವಯಸ್ಸು ತುಂಬುವವರೆಗೆ ವಿವಾಹ ನಡೆಸುವುದು ಶಿಕ್ಷಾರ್ಹ ಅಪರಾಧವಾಗಿದೆ. ನಿಯಮ ಉಲ್ಲಂಘಿಸಿ ಬಾಲ್ಯ ವಿವಾಹ ನಡೆಸಿದಲ್ಲಿ ಸಂಬಂಧಿಸಿದ ಕುಟುಂಬದ ಪಾಲಕರು ಹಾಗೂ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡ ಜನರ ವಿರುದ್ಧ ಪ್ರಕರಣ ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿ, ಕುಟುಂಬಸ್ಥರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡರು.
ಈ ವೇಳೆ ಮುಚಳಂಬ ಗ್ರಾಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ವಿನೋದ ಕುರೆ, ಗ್ರಾಪಂ ಪಿಡಿಒ ಓಂಕಾರ ಬಿರಾದಾರ, ಮಕ್ಕಳ ಸಹಾಯವಾಣಿ ಸದಸ್ಯ ಶ್ರೀಧರ ಹಜ್ಜರಗೆ, ಗ್ರಾಮೀಣ ಠಾಣೆ ಸಿಬ್ಬಂದಿ, ಅಂಗನವಾಡಿ ಮೇಲ್ವಿಚಾರಕಿ ಜ್ಯೋತಿ ಸ್ವಾಮಿ ಮೊದಲಾದವರಿದ್ದರು.
ವಡ್ಡರಾಗಾ ಗ್ರಾಮದಲ್ಲಿ ನಡೆದ ದಾಳಿಯಲ್ಲಿ ಅಂಗನವಾಡಿ ಮೇಲ್ವಿಚಾರಕಿ ಮಂಗಲ ಉಮ್ಮರಗೆ, ಜಿಲ್ಲಾ ಮಕ್ಕಳ ಘಟಕದ ಸಿಬ್ಬಂದಿ ನರಸಿಂಗ್ ಕರಾಳೆ ಹಾಗೂ ಮಂಠಾಳ ಠಾಣೆ ಪೊಲೀಸ್ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.