ನವದೆಹಲಿ:ಪಶ್ಚಿಮ ಬಂಗಾಳದಲ್ಲಿ ವಾಯಭಾರ ಕುಸಿತವಾದ ಪರಿಣಾಮ ಉಂಟಾಗಿರುವ 'ಫಣಿ' ಚಂಡಮಾರುತ ಸದ್ಯ ತೀವ್ರ ಸ್ವರೂಪ ಪಡೆದುಕೊಂಡಿದೆ.
ಒಡಿಶಾದ 19, ಆಂಧ್ರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದ ಹಲವು ಜಿಲ್ಲೆಗಳಿಗೆ ಫಣಿ ನೇರ ಪರಿಣಾಮ ಬೀರಲಿದೆ.
ಪ್ರಸ್ತುತ 185 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಒಡಿಶಾದ ಜಗತ್ಸಿಂಗ್ಪುರ, ಕೇಂದ್ರಪಾರ, ಭದ್ರಕ್ ಹಾಗೂ ಬಾಲಾಸೋರ್ ಜಿಲ್ಲೆಗಳನ್ನು ದಾಟಿ ಪಶ್ಚಿಮ ಬಂಗಾಳದತ್ತ ಮುಖ ಮಾಡಲಿದೆ.
ಚಂಡಮಾರುತ ಸಾಗುವ ಜಿಲ್ಲೆಗಳಲ್ಲಿ ಭಾರಿ ಪ್ರಮಾಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ರಾಜ್ಯದಲ್ಲಿ 900 ಪುನರ್ವಸತಿ ಕೇಂದ್ರಗಳನ್ನು ನಿರ್ಮಿಸಿದೆ. ಜೊತೆಗೆ ಕರಾವಳಿ ರಕ್ಷಣಾ ಪಡೆಯನ್ನು ಅಲರ್ಟ್ ಮಾಡಿದೆ.
ಎನ್ಡಿಆರ್ಎಫ್ ಆಂಧ್ರ ಪ್ರದೇಶದಲ್ಲಿ 12, ಒಡಿಶಾದಲ್ಲಿ 28 ಹಾಗೂ ಪಶ್ಚಿಮ ಬಂಗಾಳದಲ್ಲಿ ಆರು ತಂಡಗಳನ್ನು ನಿಯೋಜಿಸಿದೆ. ಈ ಒಂದು ತಂಡದಲ್ಲಿ 45 ಮಂದಿ ಇರುತ್ತಾರೆ. ಫಣಿ ಚಂಡಮಾರುತದಿಂದ ಇಂದು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕೇಂದ್ರ ಸರ್ಕಾರ ಪೂರ್ವಭಾವಿಯಾಗಿ 1,086 ಕೋಟಿ ಹಣವನ್ನು ಪರಿಹಾರ ಕ್ರಮಕ್ಕೆಂದು ನಾಲ್ಕು ರಾಜ್ಯಗಳಿಗೆ ನೀಡಿದೆ.