ಬೆಂಗಳೂರು: ಎರಡು ದಿನಗಳ ಹಿಂದೆ ಸಭೆ ನಡೆಸಿರುವ ಬಗ್ಗೆ ಸಿಎಂ ಸೇರಿದಂತೆ ಯಾರಿಗೂ ತಳಮಳ ಆಗಿಲ್ಲ ಎಂದು ಮಾಜಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿಕೆ ನೀಡಿದ್ದಾರೆ.
ಜೆಪಿ ನಗರದ ನಿವಾಸದಲ್ಲಿ ಮಾತನಾಡಿದ ಅವರು,ಸಚ್ಚಿದಾನಂದ ಎಂಬವರ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಲು ಹೋಗಿದ್ದೆವು. ಅಲ್ಲಿಗೆ ಸುಮಲತಾ ಕೂಡ ಬಂದಿದ್ದರು. ಬರಬೇಡಿ ಎಂದು ಹೇಳಲು ಆಗುತ್ತಾ? ನಾವು ಊಟಕ್ಕೆ ಹೋಗಿದ್ದ ವೇಳೆಯ ವೀಡಿಯೊ ಬಿಡುಗಡೆ ಮಾಡಲಾಗಿದೆ ಎಂದರು.
ಮಂಡ್ಯದಲ್ಲಿ ನಾವೇ ಸಮರ್ಥರಿದ್ದೇವೆ ಎಂದು ಸಿಎಂ ಎಚ್‌ಡಿಕೆ ಹೇಳಿಕೊಂಡಿದ್ದಾರೆ. ಅದೇ ಕಾರಣಕ್ಕೆ ನಮ್ಮನ್ನೆಲ್ಲಾ ಅವರು ಸಂಪರ್ಕಿಸಿಲ್ಲ ಅನ್ನಿಸುತ್ತೆ. ಹೀಗಿರುವಾಗ ನಾವು ಸಭೆ ಮಾಡಿದರೂ ಆತಂಕವೇಕೆ ಎಂದು ಚೆಲುವರಾಯ ಸ್ವಾಮಿ ಇದೇ ವೇಳೆ ಪ್ರಶ್ನೆ ಮಾಡಿದ್ರು.
ಸುಮಲತಾ ಕಾಂಗ್ರೆಸ್‌ನಿಂದ ಟಿಕೆಟ್ ಕೇಳಿದ್ರೂ ಕೊಟ್ಟಿಲ್ಲ. ಹಾಗಾಗಿ ಅವರ ಪರ ಕೆಲಸ ಮಾಡಬಾರದು ಎಂದು ಕಾಂಗ್ರೆಸ್ ಮುಖಂಡರು ನಮಗೆ ಹೇಳಿದ್ರು. ನಾವ್ಯಾರು ಕ್ಯಾಂಪೇನ್ ಮಾಡಿಲ್ಲ. ಸ್ಥಳೀಯವಾಗಿ ನಾವು ಯಾರದ್ದೋ ಮನೆಯ ಕಾರ್ಯಕ್ರಮಕ್ಕೆ ಹೋಗಿದ್ದೇವೆ ಅಷ್ಟೆ. ಆಪ್ತರು ಸಿಕ್ಕಾಗ ನಿಮಗೆ ಇಷ್ಟ ಬಂದಹಾಗೆ ಮಾಡಿ ಅಂದಿದ್ದೇವೆ, ಅದೆಲ್ಲ ಕ್ಯಾಂಪೇನ್ ಅಲ್ಲ. ಈ ಚುನಾವಣೆಯನ್ನು ಮಂಡ್ಯ ಜನತೆಗೆ ಬಿಟ್ಟುಬಿಡೋಣ ಎಂದರು.