ಮಂಡ್ಯ:ಲೋಕಪಾವನಿ ನದಿ ಬತ್ತಿದ ಕಾರಣಕ್ಕೆ ಈ ಭಾಗದಲ್ಲಿ ಭತ್ತ ಬೆಳೆದು ದಶಕವೇ ಕಳೆದು ಹೋಗಿದೆ. ಹೀಗಾಗಿ ಬೇರೆ ಬೆಳೆ ಬೆಳೆಯೋಣ ಅಂತ ಈ ವ್ಯಾಪ್ತಿಯ ರೈತರು ಕೊಳವೆ ಬಾವಿಯ ಮೊರೆ ಹೋಗಿದ್ದರು. ಮೊದಲೆರಡು ವರ್ಷ ಒಳ್ಳೆಯ ನೀರು ಸಿಕ್ಕಿದೆ ಕೂಡ. ಆದ್ರೆ, ಕಾಲ ಕಳೆದಂತೆ ಅಂತರ್ಜಲ ಮಟ್ಟವೂ ಕುಸಿತ ಕಂಡು, ಈಗ ಬಹುತೇಕ ಬಾವಿಗಳು ಬರಿದಾಗಿವೆ.
ಇಲ್ಲಿ ನದಿಯಷ್ಟೇ ಮಾಯವಾಗಿಲ್ಲ! ಅಂತರ್ಜಲವೂ ತಲುಪಿದೆ ಪಾತಾಳ! ಹನಿ ನೀರಿಗೂ ತತ್ವಾರ - ಹನಿ ನೀರಿಗೂ ಹಾಹಾಕಾರ
ಇಲ್ಲಿ ಬರೀ ನದಿಯಷ್ಟೇ ಮಾಯವಾಗಿಲ್ಲ. ಅಂತರ್ಜಲವೂ ಪಾತಾಳಕ್ಕೆ ಕುಸಿದಿದೆ. ಬಹುತೇಕ ಬಾವಿಗಳು ಬತ್ತಿ ಹೋಗಿದ್ದು, ಹನಿ ನೀರಿಗೂ ಜನ ಪಡಿಪಾಟಲು ಅನುಭವಿಸುತ್ತಿದ್ದಾರೆ.
ಸಾಮಾನ್ಯವಾಗಿ ನದಿ ಮುಖಜ ಭೂಮಿಯಲ್ಲಿ ಉತ್ತಮ ಅಂತರ್ಜಲ ಸಿಗುವುದು ಸಾಮಾನ್ಯ. ಕೇವಲ 200 ಅಡಿ ಕೊಳವೆ ಬಾವಿ ಕೊರೆದರೆ ಸಾಕು, ಸಾಕಷ್ಟು ನೀರು ಪುಟಿದು ಮೇಲೇಳುತ್ತದೆ. ಈಗ ಅವುಗಳು ಸೊರಗಿವೆ. ಈ ಕೊಳವೆ ಬಾವಿಗಳಲ್ಲಿ ನೀರು ಬಂದು ದಶಕಗಳೇ ಸಂದಿವೆ. ನದಿಯು ಹಿಡಿದಿಟ್ಟ ಅಂತರ್ಜಲ ಉಪಯೋಗಕ್ಕೆ ಬರುತ್ತೆ ಎಂಬ ಕಾರಣಕ್ಕೆ ಕೆಲ ರೈತರು ನದಿಯಲ್ಲೇ ಬೋರ್‌ವೆಲ್ ಕೊರೆಸಿದ್ದಾರೆ. ಮೊದಮೊದಲು ಉತ್ತಮವಾದ ನೀರು ಬಂದಿತ್ತು. ಆದರೆ, ಈಗ ನೀರಿನ ಸೆಲೆಯೇ ನಾಶವಾಗಿದೆ. ಇದರಿಂದ ಎಷ್ಟೋ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಾಲ ಮಾಡಿ ಬೋರ್‌ವೆಲ್ ಹಾಕಿಸಿದ್ದ ರೈತರ ಜೀವನ ತೊಂದರೆಯಲ್ಲಿದೆ. ಅಂತರ್ಜಲ ಮಟ್ಟ ಕುಸಿತ ಕಂಡಿರೋದರಿಂದ ಎಷ್ಟೋ ಮಂದಿ ಬೆಳೆ ಬೆಳೆಯುವುದನ್ನೇ ಬಿಟ್ಟು ನಗರ ಸೇರಿಕೊಂಡಿದ್ದಾರೆ.
ಒಂದು ಕಾಲದಲ್ಲಿ ಉತ್ತಮ ಜಲ ಮೂಲವಾಗಿದ್ದ ಲೋಕಪಾವನಿ ಈಗ ರೈತರ ಕಣ್ಣಲ್ಲಿ ನೀರು ಹರಿಸುತ್ತಿದೆ. ಸಾಲ ತೀರಿಸಲೂ ಸಾಧ್ಯವಾಗದೆ, ವ್ಯವಸಾಯ ಮಾಡಲೂ ಆಗದೇ ರೈತರು ಪಟ್ಟಣ, ನಗರಗಳತ್ತ ಮುಖ ಮಾಡಿದ್ದಾರೆ.