ಬೆಂಗಳೂರು: ರಾಜ್ಯದಲ್ಲಿ ಕೆಲವು ಕಾಂಗ್ರೆಸ್ ಶಾಸಕರನ್ನು ಮುಂದಿ ಬಿಟ್ಟು ಸಿದ್ದರಾಮಯ್ಯ ಅವರೇ ಅತೃಪ್ತಿಯ ನಾಟಕವಾಡುತ್ತಿದ್ದಾರೆ ಅನ್ನೋದು ಬಿಜೆಪಿ ಹೈಕಮಾಂಡ್ಗೆ ಮನವರಿಕೆ ಆಗಿದೆ. ಹಾಗಾಗಿ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡದಂತೆ ವರಿಷ್ಠರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ದೆಹಲಿಯಿಂದ ಹಿಂದಿರುಗಿದ ಬಳಿಕ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಹಾತೊರೆಯುತ್ತಿಲ್ಲ. ನಮಗೆ ಅದರ ಅಗತ್ಯವೂ ಇಲ್ಲ, ಪ್ರತಿಪಕ್ಷದಲ್ಲಿ ಕುಳಿತು ಅಭಿವೃದ್ಧಿ ಕೆಲಸಗಳನ್ನು ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದು ಸ್ಪಷ್ಟಪಪಡಿಸಿದರು.
ಈ ಬಾರಿ ಕೇಂದ್ರ ಸಚಿವ ಸಂಪುಟದಲ್ಲಿ ಕರ್ನಾಟಕಕ್ಕೆ 4ಸ್ಥಾನ ನೀಡಿ, ಉತ್ತಮ ಖಾತೆಗಳನ್ನೂ ಕೊಟ್ಟಿದ್ದು, ನಮಗೆ ತೃಪ್ತಿಯಾಗಿದೆ. ಆದರೂ ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ಇನ್ನೂ ಕೆಲವರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು.
ಜೂನ್ 5ರಂದು ಬೆಂಗಳೂರಿನಲ್ಲಿ ನೂತನ ಸಂಸದರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿದ್ದೇವೆ. ಅಂದು ಶಾಸಕರು, ಸಂಸದರು ಹಾಗೂ ಪಕ್ಷದ ಪ್ರಮುಖರೊಂದಿಗೆ ಚರ್ಚಿಸಿ ರಾಜ್ಯ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳು ಮತ್ತು ವೈಫಲ್ಯಗಳ ವಿರುದ್ಧ ಹೋರಾಟ ರೂಪಿಸುತ್ತೇವೆ ಎಂದರು.
ಸ್ಥಳೀಯ ಸಂಸ್ಥೆಗಳ ಫಲಿತಾಂಶ ನಿರೀಕ್ಷಿತ: ಸಹಜವಾಗಿಯೇ ಮೈತ್ರಿ ಪಕ್ಷಗಳು ಆಡಳಿತ ಯಂತ್ರ ದುರುಪಯೋಗ ಮಾಡಿಕೊಂಡು ಹೆಚ್ಚು ಸ್ಥಾನಗಳನ್ನು ಪಡೆದಿದ್ದಾರೆ. ಆದ್ದರಿಂದ ಸ್ಥಳೀಯ ಸಂಸ್ಥೆಗಳ ಫಲಿತಾಂಶದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆದ್ದುಕೊಂಡಿದೆ ಎಂದು ಬಿಎಸ್ವೈ ಆರೋಪಿಸಿದರು.
ಜಿಂದಾಲ್ ಸಂಸ್ಥೆಗೆ 3000 ಎಕರೆ ಭೂಮಿಯನ್ನು ಕೊಡುವ ರಾಜ್ಯ ಸರ್ಕಾರದ ನಿರ್ಣಯವನ್ನು ವಿರೋಧಿಸುತ್ತೇವೆ. ಈ ಭೂಮಿಯನ್ನು ಮತ್ತಷ್ಟು ವರ್ಷ ಗುತ್ತಿಗೆ ಅವಧಿ ವಿಸ್ತರಿಸಿದ್ದರೆ ನಮ್ಮ ವಿರೋಧ ಇರುತ್ತಿರಲ್ಲ. ಆದರೆ, ಕಡಿಮೆ ಬೆಲೆಗೆ ಮಾರಾಟ ಮಾಡುವುದನ್ನು ಒಪ್ಪಲು ಸಾಧ್ಯವೇ ಇಲ್ಲ. ರಾಜ್ಯದ ನೆಲ, ಜಲ ರಕ್ಷಣೆಗೆ ಹೋರಾಟ ರೂಪಿಸಲೇಬೇಕಾಗುತ್ತದೆ ಎಂದು ಸರ್ಕಾರಕ್ಕೆ ಬಿಎಸ್ವೈ ಎಚ್ಚರಿಕೆ ರವಾನಿಸಿದರು.