ವಾಷಿಂಗ್ಟನ್ [ಅಮೆರಿಕ] ಇತ್ತೀಚೆಗೆ ಭಾರತದ ಕೊರೊನಾ ಪರಿಹಾರ ನಿಧಿಗೆ 1 ಮಿಲಿಯನ್ ಡಾಲರ್ ಸಂಗ್ರಹಿಸುವ ಗುರಿಯನ್ನು ಸಾಧಿಸಿದ ಬಳಿಕ, ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಪತಿ, ಪಾಪ್ ಸ್ಟಾರ್ ನಿಕ್ ಜೋನಸ್ ಅವರು ತಮ್ಮ ನಿಧಿಸಂಗ್ರಹದ ಗುರಿಯನ್ನು 3 ಮಿಲಿಯನ್ ಡಾಲರ್‌ಗೆ ಹೆಚ್ಚಿಸಿದ್ದಾರೆ ಎಂದು ಘೋಷಿಸಿದ್ದಾರೆ.
ಗಿವ್‌ಇಂಡಿಯಾ ಸಹಯೋಗದೊಂದಿಗೆ ಸ್ಟಾರ್ ದಂಪತಿ ನಿಧಿಸಂಗ್ರಹವನ್ನು ಘೋಷಿಸಿದಾಗ 1 ಮಿಲಿಯನ್ ಡಾಲರ್ ಸಂಗ್ರಹವಾಗಿತ್ತು. ಇದೀಗ 3 ಮಿಲಿಯನ್ ಅಮೆರಿಕನ್ ಡಾಲರ್ ಸಂಗ್ರಹಿಸುವ ಗುರಿ ಹೊಂದಿದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕಾ, “ನಾವೆಲ್ಲರೂ ಸಹಾಯ ಮಾಡುವುದನ್ನು ಮುಂದುವರಿಸಬಹುದು. ನಾವು ನಿಧಿಸಂಗ್ರಹಿಸುವ ಗುರಿಯನ್ನು 3 ಮಿಲಿಯನ್ ಡಾಲರ್‌ಗೆ ಹೆಚ್ಚಿಸುತ್ತಿದ್ದೇವೆ. ನಿಮ್ಮ ಸಹಾಯ ಮತ್ತು ಬೆಂಬಲದಿಂದ ನಾವು ಇದನ್ನು ಸಾಧಿಸಬಹುದು. ಧನ್ಯವಾದಗಳು ನಿಮ್ಮೆಲ್ಲರ ಬೆಂಬಲಕ್ಕಾಗಿ” ಎಂದು ಬರೆದುಕೊಂಡಿದ್ದಾರೆ.
ಇನ್ನು ಈ ವರ್ಷ ನಿಕ್ ಜೋನಸ್ ಅವರು ಬಿಲ್ಬೋರ್ಡ್ ಮ್ಯೂಸಿಕ್ ಅವಾರ್ಡ್ಸ್ ಅನ್ನು ಆಯೋಜಿಸುತ್ತಿದ್ದಾರೆ. ಇದು ಎಂದಿಗೂ ಊಹಿಸಲಾಗದ ಒಂದು ಅವಕಾಶ ಎಂದು ಜೋನಸ್ ಹೇಳಿದ್ದಾರೆ.
ಇನ್ನು ಬಾಲಿವುಡ್‌ನ ಅನೇಕ ಗಣ್ಯರಾದ ಸೋನು ಸೂದ್, ಅನುಷ್ಕಾ ಶರ್ಮಾ, ಅಮಿತಾಬ್ ಬಚ್ಚನ್, ಹೇಮಾ ಮಾಲಿನಿ, ವರುಣ್ ಧವನ್, ಅಕ್ಷಯ್ ಕುಮಾರ್, ಅನುಪಮ್ ಖೇರ್ ಮತ್ತು ಇತರರು ದೇಶದಲ್ಲಿ ಉಂಟಾದ ಸಮಸ್ಯೆಯ ಸಂದರ್ಭದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ.