ತುಮಕೂರು: ಮುಂದಿನ ಜೂನ್ 5 ರ ವಿಶ್ವ ಪರಿಸರ ದಿನಾಚರಣೆಯಂದು ತುಮಕೂರು ಜಿಲ್ಲೆಯಲ್ಲಿ ಒಂದು ಕೋಟಿ ಗಿಡಗಳನ್ನು ನೆಡುವ ಮೂಲಕ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸೇರುವ ಸಂಬಂಧ ಸಾರ್ವಜನಿಕರೊಂದಿಗೆ ಚರ್ಚಿಸಿ ಕಾರ್ಯಕ್ರಮವನ್ನು ರೂಪಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಬೆಂಗಳೂರು ರೋಟರಿ ಕ್ಲಬ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಕೋಟಿ ನಾಟಿ’ ಹಸಿರಿಕರಣದ ಜನಾಂದೋಲನ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. 1 ಕೋಟಿ ಗಿಡಗಳನ್ನು ಜಿಲ್ಲೆಯಲ್ಲಿ ನೆಡಬೇಕು. ರೋಟರಿ ಸಂಸ್ಥೆ ತುಮಕೂರು ತಾಲೂಕಿನಲ್ಲಿ ಒಂದು ಕೋಟಿ ಸಸಿಗಳನ್ನು ನಡೆಲು ಕಾರ್ಯಕ್ರಮ ರೂಪಿಸಿದೆ. ಪ್ರತಿ ತಾಲೂಕಿನಲ್ಲೂ 10 ಲಕ್ಷ ಸಸಿ, ಜಿಲ್ಲೆಯಲ್ಲಿ ಒಂದು ಕೋಟಿ ಗಿಡ ನೀಡಲು ಮುಂದಾಗಬೇಕು. ಇದಕ್ಕೆ ಎಲ್ಲ ರೀತಿಯ ನೆರವನ್ನು ಒದಗಿಸಲಾಗುವುದು ಎಂದು ತಿಳಿಸಿದರು.