ಫೆಬ್ರವರಿ 6ರಿಂದ ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಆರಂಭಗೊಳ್ಳಲಿರುವ ಮೂರು ಟಿ-20 ಪಂದ್ಯಗಳ ಸರಣಿಯಿಂದ ನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಒಂದು ವೇಳೆ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿದ್ದೇ ಆದಲ್ಲಿ ನಾಯಕ ಪಟ್ಟ ಮಹೇಂದ್ರ ಸಿಂಗ್ ಧೋನಿಗೆ ಒಲಿಯಲಿದೆ.
ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸರಣಿ ಹಾಗೂ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಆರಂಭಿಕ ಜೋಡಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ಗೆ ಸೇರಿದಂತೆ ವೇಗಿ ಮೊಹಮ್ಮದ್ ಶೆಮಿಗೆ ಕೆಲವೊಂದು ಪಂದ್ಯಗಳಿಂದ ವಿಶ್ರಾಂತಿ ನೀಡಲಾಗುವುದು ಎಂದು ಬಿಸಿಸಿಐ ಮೂಲಗಳಿಂದ ಗೊತ್ತಾಗಿದೆ.
ಇನ್ನು ಕಿವೀಸ್ ವಿರುದ್ಧದ ಟಿ-20 ಸರಣಿಯಿಂದಲೂ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಈಗ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲು ಕೋಚ್ ಆಲೋಚಿಸಿದ್ದಾರೆ. ಒಂದು ವೇಳೆ ರೋಹಿತ್ ಶರ್ಮಾ ವಿಶ್ರಾಂತಿ ಪಡೆದಲ್ಲಿ ಧೋನಿ ನಾಯಕನಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಧೋನಿ 2017ರಲ್ಲಿ ಟಿ-20 ಮತ್ತು ಏಕದಿನ ಪಂದ್ಯಗಳಿಗೆ ಕ್ಯಾಪ್ಟನ್ಸಿ ಪಟ್ಟಕ್ಕೆ ಗುಡ್ ಬೈ ಹೇಳಿದ್ದರು. ಇತ್ತೀಚೆಗೆ ಧೋನಿಗೆ ನಾಯಕತ್ವದ ಪಟ್ಟ ಒಲಿದು ಬಂದಿತ್ತು. ಧೋನಿ ಇಲ್ಲಿಯವರೆಗೆ 200 ಏಕದಿನ ಪಂದ್ಯಗಳಲ್ಲಿ ಕ್ಯಾಪ್ಟನ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಈಗ ಟಿ-20ಯಲ್ಲಿ ಮತ್ತೆ ಕ್ಯಾಪ್ಟನ್ ಪಟ್ಟ ಒಲಿದು ಬರುವ ಸಾಧ್ಯತೆ ಹೆಚ್ಚಾಗಿದೆ. ಒಂದು ವೇಳೆ ಕಿವೀಸ್ ವಿರುದ್ಧದ ಟಿ-20 ಸರಣಿಗೆ ಧೋನಿ ನಾಯಕವಾದಲ್ಲಿ ಫ್ಯಾನ್ಸ್ಗಳು ಕುಣಿದು ಕುಪ್ಪಳಿಸಲಿದ್ದಾರೆ.