ಕಠ್ಮಂಡು: ಪುಷ್ಪಕಮಲ್ ದಹಲ್ ಪ್ರಚಂಡ ನೇತೃತ್ವದ ಸಿಪಿಎನ್ ಪಕ್ಷ ತನ್ನ ಬೆಂಬಲವನ್ನು ಹಿಂತೆಗೆದುಕೊಂಡ ಹಿನ್ನೆಲೆ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರು ಸದನದಲ್ಲಿ ವಿಶ್ವಾಸ ಮತ ಕಳೆದುಕೊಂಡಿದ್ದಾರೆ. ಈ ಮುಖಾಂತರ ಅವರ ಸರ್ಕಾರ ಪದಚ್ಯುತಗೊಂಡಿದೆ.
ವಿಶ್ವಾಸ ಮತದಲ್ಲಿ ಸೋತ ನೇಪಾಳ ಪಿಎಂ : ಪದಚ್ಯುತಗೊಂಡ ಒಲಿ ಸರ್ಕಾರ - ಪುಷ್ಪಕಮಾಲ್ ದಹಲ್ ಪ್ರಚಂಡ
ತಮ್ಮ ಹದಿಹರೆಯದ ವಯಸ್ಸಿನಲ್ಲಿ ವಿದ್ಯಾರ್ಥಿ ಕಾರ್ಯಕರ್ತನಾಗಿ ರಾಜಕೀಯಕ್ಕೆ ಸೇರಿದ ಒಲಿ ಕಷ್ಟಪಟ್ಟು ಪ್ರಧಾನಿ ಪಟ್ಟಕ್ಕೆ ಏರಿದ್ದರು. ಇದಕ್ಕೂ ಮೊದಲು ರಾಜಪ್ರಭುತ್ವವನ್ನು ವಿರೋಧಿಸಿದ್ದಕ್ಕಾಗಿ 14 ವರ್ಷ ಜೈಲಿನಲ್ಲಿದ್ದ ಒಲಿ, ಎಡಪಂಥೀಯ ಮೈತ್ರಿಕೂಟದ ಜಂಟಿ ಅಭ್ಯರ್ಥಿಯಾಗಿ 2018 ರಲ್ಲಿ ಎರಡನೇ ಬಾರಿಗೆ ನೇಪಾಳದ ಪ್ರಧಾನಿಯಾಗಿದ್ದರು.
ಅಧ್ಯಕ್ಷ ಬಿದ್ಯಾ ದೇವಿ ಭಂಡಾರಿ ಅವರ ನಿರ್ದೇಶನದ ಮೇರೆಗೆ ನಡೆದ ವಿಶೇಷ ಅಧಿವೇಶನದಲ್ಲಿ ಪ್ರಧಾನಿ ಒಲಿ ಸಂಸತ್ತಿನ ಕೆಳಮನೆಯಲ್ಲಿ 93 ಮತಗಳನ್ನು ಮಾತ್ರ ಪಡೆದರು. 69 ವರ್ಷದ ಒಲಿ ಅವರು 275 ಸದಸ್ಯರ ಪ್ರತಿನಿಧಿ ಸದನದಲ್ಲಿ ಕನಿಷ್ಠ 136 ಮತಗಳನ್ನು ಪಡೆಯಬೇಕಿತ್ತು. ಇನ್ನು ನಾಲ್ಕು ಸದಸ್ಯರು ಅಮಾನತುಗೊಂಡಿದ್ದರು. ನಿರ್ಣಯದ ವಿರುದ್ಧ ಒಟ್ಟು 124 ಸದಸ್ಯರು ಮತ ಚಲಾಯಿಸಿದರೆ, 15 ಸದಸ್ಯರು ತಟಸ್ಥರಾಗಿದ್ದಾರೆ ಎಂದು ಸ್ಪೀಕರ್ ಅಗ್ನಿ ಸಪ್ಕೋಟಾ ತಿಳಿಸಿದ್ದಾರೆ.
ಅಧಿವೇಶನದಲ್ಲಿ ಒಟ್ಟು 232 ಶಾಸಕರು ಭಾಗವಹಿಸಿದ್ದರು. ಒಲಿ ಅವರು 100 (3) ನೇ ವಿಧಿ ಪ್ರಕಾರ ಸ್ವಯಂಚಾಲಿತವಾಗಿ ತಮ್ಮ ಹುದ್ದೆಯಿಂದ ಮುಕ್ತರಾಗಲಿದ್ದಾರೆ.