ಬೆಂಗಳೂರು:ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದ ಕೊರೊನಾ ಸೋಂಕಿತರ ನೆರವಿಗೆಂದು ಕೊಡಮಾಡಿರುವ ಆ್ಯಂಬುಲೆನ್ಸ್ ಸೇವೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬೆಂಗಳೂರಿನ ಕೆಪಿಸಿಸಿ ಕಚೇರಿ ಎದುರು ಚಾಲನೆ ನೀಡಿದರು.
ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ರಾಜ್ಯದಲ್ಲಿ ಸೂಕ್ತ ಆರೋಗ್ಯ ಸೌಲಭ್ಯ ಸಿಗದೆ ಜನ ಸಾಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಬಡವರಿಗೆ ಸೂಕ್ತ ರೀತಿಯ ಆಸ್ಪತ್ರೆ ಚಿಕಿತ್ಸೆ ಹಾಗೂ ಆ್ಯಂಬುಲೆನ್ಸ್ ಸೇವೆಯ ಸೌಲಭ್ಯ ಸಿಗುತ್ತಿಲ್ಲ. ವ್ಯಾಕ್ಸಿನೇಷನ್ ಸಹ ಸಮರ್ಪಕವಾಗಿ ದೊರಕುತ್ತಿಲ್ಲ. ಕೊರೊನಾ ರೋಗದ ವಿರುದ್ಧ ಜನ ಹೋರಾಡಬೇಕು ಎಂದಾದರೆ ಅತ್ಯಂತ ಪ್ರಮುಖವಾಗಿ ವ್ಯಾಕ್ಸಿನೇಷನ್ ಕಾರ್ಯವನ್ನು ಯಶಸ್ವಿಯಾಗಿ ನಡೆಸಬೇಕು ಎಂದರು.
ಬಡವರಿಗೆ ಹಾಗೂ ಕಾರ್ಮಿಕರಿಗೆ ಸ್ಮಾರ್ಟ್ ಫೋನ್ ಬಳಕೆಯ ಅರಿವು ಅಷ್ಟಾಗಿ ಇರುವುದಿಲ್ಲ. ಆನ್ಲೈನ್ ಮೂಲಕ ನೋಂದಣಿ ಮಾಡಿಸಿಕೊಳ್ಳುವ ಕಾರ್ಯ ಕಷ್ಟಸಾಧ್ಯವಾಗಿರುತ್ತದೆ. ಇದರಿಂದಾಗಿ ಕಾಂಗ್ರೆಸ್ ಪಕ್ಷ ಹಾಗೂ ಯುವ ಕಾಂಗ್ರೆಸ್ ಒಂದಾಗಿ ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಹಮ್ಮಿಕೊಂಡಿದೆ. ಕೊರೊನಾ ಮಹಾಮಾರಿಯಿಂದ ತೊಂದರೆಗೆ ಯಾರೇ ಒಳಗಾದರೂ ಅವರ ಸಹಾಯಕ್ಕೆ ಕಾಂಗ್ರೆಸ್ ಧಾವಿಸಲಿದೆ. ನಾವೆಲ್ಲ ಒಗ್ಗಟ್ಟಾಗಿ ಜನರ ಸಹಾಯಕ್ಕೆ ಮುಂದಾಗುತ್ತೇವೆ. ಯಾವುದೇ ಸನ್ನಿವೇಶ ಸಂದರ್ಭ ಹಾಗೂ ತೊಂದರೆ ಎದುರಾದಾಗ ಸಹಾಯಕ್ಕೆ ಒಂದಾಗುವುದು ಕಾಂಗ್ರೆಸ್ ಪಕ್ಷದ ಧರ್ಮ. ಯುವ ಕಾಂಗ್ರೆಸ್ ಈ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯಪ್ರವೃತ್ತವಾಗಿರುತ್ತವೆ ಎಂದರು.
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕುರಿತು ಕೇಳಿದ ಪ್ರಶ್ನೆಗೆ, ಸಾಕಷ್ಟು ಜನ ಸಂಕಷ್ಟ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ಈ ವಿಚಾರವಾಗಿ ಮಾತ್ರ ಮಾತನಾಡುತ್ತೇನೆ. ಬೇರೆ ಯಾವುದೇ ವಿಚಾರವನ್ನು ಮಾತನಾಡುವುದಿಲ್ಲ. ಸದ್ಯಕ್ಕೆ ನಾವು ಜನರ ಸೇವೆಯನ್ನು ಮಾಡುವ ಕೆಲಸವನ್ನು ಮಾತ್ರ ಮಾಡುತ್ತಿದ್ದೇವೆ. ಈ ಸಂದರ್ಭದಲ್ಲಿ ಜನರ ಜೀವ ಉಳಿಸುವುದು ಅತ್ಯಂತ ಪ್ರಮುಖ. ಯುವ ಕಾಂಗ್ರೆಸ್ ಚುನಾವಣಾ ಸಮಿತಿ ಇದೆ. ಅವರು ಸಕಾಲಕ್ಕೆ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಈ ಸಂಬಂಧ ದನಿ ಎತ್ತೋಣ ಎಂದು ತಿಳಿಸಿದರು.