ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಬರುವ ಏಪ್ರಿಲ್ 26ರಂದು ವಾರಣಾಸಿ ಸಂಸದೀಯ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಅದಕ್ಕೂ ಮುನ್ನಾದಿನ ಬೃಹತ್ ರೋಡ್ ಶೋನಲ್ಲಿ ನಮೋ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
2014ರ ಲೋಕಸಭಾ ಚುನಾವಣೆ ವೇಳೆ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್ ಹಾಗೂ ಕಾಂಗ್ರೆಸ್ನ ಅಜಯ್ ರಾವ್ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿದ್ದರು. ಈ ಸಲವೂ ಅದೇ ಕ್ಷೇತ್ರದಿಂದ ತಮ್ಮ ಅದೃಷ್ಠ ಪರೀಕ್ಷೆಗೆ ಪ್ರಧಾನಿ ಮೋದಿ ಮುಂದಾಗಿದ್ದಾರೆ.
ಏಪ್ರಿಲ್ 25ರಂದು ಮಧ್ಯಾಹ್ನ ಬೃಹತ್ ರೋಡ್ ಶೋ ನಡೆಸಲಿರುವ ಮೋದಿ, ಮರುದಿನ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಅದಕ್ಕೂ ಮುಂಚಿತವಾಗಿ ಮೋದಿ ಪಕ್ಷದ ಮುಖ್ಯಸ್ಥ ಅಮಿತ್ ಶಾ, ಜೆಪಿ ನಡ್ಡಾ, ಲಕ್ಷ್ಮಣ್ ಆಚಾರ್ಯ, ಸುನೀಲ್ ಓಜಾ ಹಾಗೂ ಅಶುತೋಷ್ ಜತೆ ಮಹತ್ವದ ಮೀಟಿಂಗ್ ಕೂಡ ನಡೆಸಲಿದ್ದಾರೆ.
ರೋಡ್ ಶೋ ಲಂಕಾ ಗೇಟ್ನ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಆರಂಭಗೊಳ್ಳಲಿದ್ದು, ಇದೇ ವೇಳೆ ಪಂಡಿತ್ ಮದನ್ ಮೋಹನ್ ಮಾಳವಿಯಾ ಪುತ್ಥಳಿಗೆ ಮೋದಿ ಪುಷ್ಪ ವೃಷ್ಟಿ ಮಾಡಲಿದ್ದಾರೆ. ಈ ವೇಳೆ ಅನೇಕ ಬಿಜೆಪಿ ನಾಯಕರು ಭಾಗಿಯಾಗಲಿದ್ದಾರೆ. ವಾರಣಾಸಿಯ ಕ್ಷೇತ್ರಕ್ಕೆ 7ನೇ ಹಂತದಲ್ಲಿ ಅಂದರೆ ಮೇ 19ರಂದು ಮತದಾನ ನಡೆಯಲಿದೆ.