ಬೆಂಗಳೂರು:ಪಂಚ ರಾಜ್ಯಗಳ ಚುನಾವಣೆ ಮತ್ತು ಕರ್ನಾಟಕ ಉಪ ಚುನಾವಣೆಯಲ್ಲಿ ಬಿಜೆಪಿ ಅಸಾಮಾನ್ಯ ಸಾಧನೆ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಅಸ್ಸಾಂನಲ್ಲಿ ಸಿಎಎ ಷಡ್ಯಂತ್ರ ಮೆಟ್ಟಿ ನಿಂತು ಮತ್ತೆ ಗೆದ್ದಿದ್ದೇವೆ. ಪುದುಚೆರಿಯಲ್ಲಿ ಇತಿಹಾಸ ಸೃಷ್ಟಿಸಿ ಇದೇ ಮೊದಲ ಬಾರಿ ಅಧಿಕಾರಕ್ಕೇರಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದೇವೆ, 3 ರಿಂದ 80ರ ಗಡಿಗೆ ಬಂದಿದ್ದೇವೆ. ಕೇರಳ, ತಮಿಳುನಾಡಿನಲ್ಲಿ ಭಾರೀ ಪ್ರಮಾಣದಲ್ಲಿ ವೋಟ್ ಶೇರ್ ಹೆಚ್ಚಿಸಿಕೊಂಡಿದ್ದೇವೆ. ಕರ್ನಾಟಕದಲ್ಲಿಯೂ ಬಿಜೆಪಿ ಉತ್ತಮ ಪ್ರದರ್ಶನವನ್ನೇ ನೀಡಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಕೆಲವೇ ವರ್ಷಗಳ ಹಿಂದೆ ಇವಿಷ್ಟೂ ರಾಜ್ಯಗಳಲ್ಲಿ ಬಿಜೆಪಿ ಸರಿಯಾಗಿ ಅಸ್ತಿತ್ವವೂ ಇರಲಿಲ್ಲ.. ಮುಂದಿನ ದಿನಗಳಲ್ಲಿ ಅಧಿಕಾರಕ್ಕೇರುವ ಮೂಲಕ ಮತ್ತೆ ಇತಿಹಾಸ ಸೃಷ್ಟಿಸುತ್ತೇವೆ. ದೇಶವಿಡೀ ಮೋದಿ ಹಾಗೂ ಬಿಜೆಪಿ ಜೊತೆಗೆ ಇದೆ ಎಂಬುದು ಮತ್ತೆ ಮತ್ತೆ ಸಾಬೀತಾಗಿದೆ. ಅಲ್ಲದೆ ಕಾಂಗ್ರೆಸ್ ಧೂಳಿಪಟವಾಗಿದೆ. ಚುನಾವಣೆ ನಡೆದ ಅಷ್ಟೂ ರಾಜ್ಯಗಳಲ್ಲಿ ಕಾಂಗ್ರೆಸ್ನ ಅಭ್ಯರ್ಥಿಗಳು ಹೀನಾಯವಾಗಿ ಸೋತಿದ್ದಾರೆ. ಇತಿಹಾಸದ ಅತಿ ಹಳೆಯ ಪಕ್ಷ ಇತಿಹಾಸದ ಪುಟ ಸೇರುವಂತೆ ಭಾರತದ ಜನತೆ ಮತ್ತೆ ತೀರ್ಪು ನೀಡಿದ್ದಾರೆ ಎಂದು ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.