ನವದೆಹಲಿ:ಇಂದು ದೇಶದ ಎಂಟು ರಾಜ್ಯಗಳ 59 ಕ್ಷೇತ್ರಗಳಲ್ಲಿ ಕೊನೆಯ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದರೆ ಅತ್ತ ಸರ್ಕಾರ ರಚನೆಯ ಕಸರತ್ತುಗಳು ಸದ್ದಿಲ್ಲದೆ ಶುರುವಾಗಿದೆ.
ತೃತೀಯ ರಂಗದ ಮೂಲಕ ಸರ್ಕಾರವನ್ನು ರಚಿಸಲು ಮುಂದಾಗಿರುವ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಇಂದು ಹಲವು ಪ್ರಮುಖ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಶುಕ್ರವಾರ ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಿರುವ ನಾಯ್ಡು ವಿವಿಧ ನಾಯಕರನ್ನು ಮೀಟ್ ಮಾಡಿದ್ದಾರೆ. ಶನಿವಾರದಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಎಲ್ಜೆಡಿ ನಾಯಕ ಶರದ್ ಪವಾರ್ರನ್ನು ಭೇಟಿ ಮಾಡಿದ್ದಾರೆ.
ಇಂದು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿಯನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಬಿಜೆಪಿ ಹೊರತಾದ ಸರ್ಕಾರದ ರಚನೆಯ ಕುರಿತಂತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಇಂದು ಸಂಜೆ ವೇಳೆ ಎಸ್ಪಿ ಹಾಗೂ ಬಿಎಸ್ಪಿ ನಾಯಕರನ್ನು ಹಾಗೂ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿಯನ್ನು ಭೇಟಿ ಆಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನೊಂದೆಡೆ ಚಂದ್ರಬಾಬು ನಾಯ್ಡು ರಾಜಕೀಯ ವಿರೋಧಿ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಕಳೆದ ವಾರವೇ ಹಲವು ನಾಯಕರನ್ನು ಭೇಟಿ ಮಾಡಿ ಬಿಜೆಪಿ ಹಾಗೂ ಕಾಂಗ್ರೆಸ್ ಹೊರತಾದ ಸರ್ಕಾರ ರಚನೆಗೆ ಬೆಂಬಲ ಕೇಳಿದ್ದರು. ಕೇರಳ ಸಿಎಂ ಪಿಣರಾಯಿ ವಿಜಯನ್ ಹಾಗೂ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ರನ್ನು ಮೀಟ್ ಮಾಡಿದ್ದರು.
ಚಂದ್ರಬಾಬು ನಾಯ್ಡು ಹಾಗೂ ಕೆ.ಚಂದ್ರಶೇಖರ ರಾವ್ ನಡುವಿನ ರಾಜಕೀಯ ಸ್ಪರ್ಧೆ ಯಾರಿಗೆ ಲಾಭ ತರಲಿದೆ ಹಾಗೂ ಯಾರು ಮೇಲುಗೈ ಸಾಧಿಸಲಿದ್ದಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲ..!