ಚೆನ್ನೈ: ಇಮ್ರಾನ್ ತಾಹಿರ್ ಎಂದಾಕ್ಷಣ ಮೈದಾನ ತುಂಬೆಲ್ಲಾ ಓಡಾಡಿ ವಿಕೆಟ್ ಕಿತ್ತ ಸಂಭ್ರಮವನ್ನು ವ್ಯಕ್ತಪಡಿಸುವ ಪರಿ ಕ್ರಿಕೆಟ್ ಪ್ರೇಮಿಗಳ ಕಣ್ಣಮುಂದೆ ಬರುತ್ತದೆ.
ತಾಹಿರ್ ಯಾವುದೇ ಆಟಗಾರನನ್ನಾದರೂ ಔಟ್ ಮಾಡಲಿ ಯಾರ ಕೈಗೂ ಸಿಗದೆ ಮೈದಾನದ ಯಾವುದೋ ಮೂಲೆಯತ್ತ ಕ್ಷಣ ಮಾತ್ರದಲ್ಲಿ ಓಡುತ್ತಾರೆ. ತಂಡದ ಇತರ ಸದಸ್ಯರೂ ತಾಹಿರ್ ಹಿಂದೆಯೇ ಓಡಿ ಶುಭಾಶಯ ತಿಳಿಸುವ ಅನಿವಾರ್ಯತೆ ಎದುರಾಗುತ್ತದೆ.
ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡುತ್ತಿರುವ ಇಮ್ರಾನ್ ತಾಹಿರ್ ಪ್ರತೀ ಪಂದ್ಯದಲ್ಲೂ ವಿಕೆಟ್ ಕಿತ್ತಾಗ ಮೈದಾನದ ಉದ್ದಗಲಕ್ಕೂ ಓಡಿದ್ದಾರೆ. ಇದನ್ನು ಹೇಗೆ ಸಂಭಾಳಿಸುತ್ತೀರಾ ಎಂದು ಸಿಎಸ್ಕೆ ನಾಯಕ ಎಂ.ಎಸ್.ಧೋನಿಯನ್ನು ಹರ್ಷ ಭೋಗ್ಲೆ ಪ್ರಶ್ನಿಸಿದಾಗ ಕುತೂಹಲಕಾರಿ ವಿಚಾರ ಹಂಚಿಕೊಂಡಿದ್ದಾರೆ.
"ನಾನು ಹಾಗೂ ವ್ಯಾಟ್ಸನ್ ನೀನು ಹೋದ ಜಾಗಕ್ಕೆ ಬಂದು ಕಂಗ್ರಾಟ್ಸ್ ಹೇಳುವುದಿಲ್ಲ. ನಿನ್ನಂತೆ ನಮಗೆ ಓಡಿ ಬರಲು ಸಾಧ್ಯವಿಲ್ಲ ಎಂದು ತಾಹಿರ್ಗೆ ಹೇಳಿದ್ದೇನೆ" ಎಂದು ಮಾಹಿ ಉತ್ತರಿಸಿದ್ದಾರೆ.
"ಉತ್ತಮ ವಿಚಾರವೆಂದರೆ ಕೆಲ ಹೊತ್ತಿನಲ್ಲೇ ತಾಹಿರ್ ವಿಕೆಟ್ ಬಳಿ ಬರುತ್ತಾರೆ. ಈ ವೇಳೆ ನಾನು ಹಾಗೂ ವ್ಯಾಟ್ಸನ್ ತೆರಳಿ ಉತ್ತಮವಾಗಿ ಬೌಲ್ ಮಾಡಿದ್ದೀಯಾ ಎನ್ನುತ್ತೇವೆ" ಎಂದು ಧೋನಿ ಹೇಳಿದ್ದಾರೆ.