ಲಖನೌ: ತನ್ನ ಮಗನ ಶವವನ್ನು ರವಾನಿಸಲು ಆಸ್ಪತ್ರೆಯ ಸಿಬ್ಬಂದಿ ಆ್ಯಂಬುಲೆನ್ಸ್ ನೀಡದ ಪರಿಣಾಮ ತಾಯಿಯೇ ತನ್ನ ಮಗುವನ್ನ ಹೆಗಲಿನಲ್ಲಿ ಹೊತ್ತೊಯ್ದ ಮನಕಲಕುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ತೀವ್ರ ಜ್ವರದ ಹಿನ್ನೆಲೆಯಲ್ಲಿ ಮಗುವನ್ನು ಮೇ 28ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮರುದಿನ ಮುಂಜಾನೆ ಮಗುವನ್ನು ಬೇರೆ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸೂಚಿಸಿದ್ದಾರೆ.
ನಾಲ್ಕು ಕಿ.ಮೀ ಮಗನ ಶವ ಹೊತ್ತು ಸಾಗಿದ ಅಮ್ಮ ಈ ವೇಳೆ ಪೋಷಕರು ವಾಹನ ನೀಡುವಂತೆ ಆಸ್ಪತ್ರೆ ಸಿಬ್ಬಂದಿ ಬಳಿ ಮನವಿ ಮಾಡಿದ್ದಾರೆ. ಆ ವೇಳೆ ಮೂರು ಆ್ಯಂಬುಲೆನ್ಸ್ಗಳಿದ್ದರೂ ಸಿಬ್ಬಂದಿ ಸೇವೆ ಒದಗಿಸಲು ನಿರಾಕರಿಸಿದ್ದಾರೆ ಎಂದು ಮೃತ ಮಗುವಿನ ತಂದೆ ತಿಳಿಸಿದ್ದಾರೆ.
ಖಾಸಗಿ ವಾಹನದಲ್ಲಿ ತೆರಳಲು ಬಾಲಕನ ಹೆತ್ತವರ ಬಳಿ ಹಣ ಇಲ್ಲದ ಕಾರಣ ಆತ ಅದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಕೊನೆಗೆ ತಾಯಿ ತನ್ನ ಮಗನ ಮೃತದೇಹವನ್ನು ಸುಮಾರು ನಾಲ್ಕು ಕಿ.ಮೀ ದೂರ ಕೈಯಲ್ಲೇ ಹೊತ್ತು ಸಾಗಿದ್ದಾರೆ.