ಮುಂಬೈ: ಮೇ 30ರಿಂದ ಆರಂಭಗೊಳ್ಳಲಿರುವ ಐಸಿಸಿ ಏಕದಿನ ವಿಶ್ವಕಪ್ಗಾಗಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ನಾಳೆ ಇಂಗ್ಲೆಂಡ್‌ನತ್ತ ಪ್ರಯಾಣ ಬೆಳೆಸಲಿದೆ. ಅದಕ್ಕೂ ಮುಂಚಿತವಾಗಿ ಇಂದು ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು.
ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹಾಗೂ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದರು. ಈ ಬಾರಿಯ ವಿಶ್ವಕಪ್ ಹೆಚ್ಚು ಸ್ಪರ್ಧಾತ್ಮಕವಾಗಿದ್ದು, ಉತ್ತಮ ಪ್ರದರ್ಶನದತ್ತ ಗಮನ ಹರಿಸಲಾಗುವುದು ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ವಿಶ್ವಕಪ್ಗಾಗಿ ಎಲ್ಲ ಆಟಗಾರರು ಉತ್ತಮ ಫಾರ್ಮ್ನಲ್ಲಿದ್ದಾರೆ. ಟ್ರೋಫಿ ಗೆಲ್ಲುವತ್ತ ಹೆಚ್ಚಿನ ಗಮನ ಹರಿಸಲಾಗುವುದು. ಎದುರಾಳಿ ತಂಡ ಯಾವುದೇ ಟಾರ್ಗೆಟ್ ನೀಡಿದರೂ ಅದನ್ನ ಬೆನ್ನಟ್ಟುವುದರ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದು ತಿಳಿಸಿರುವ ಕೊಹ್ಲಿ, ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಭಾರತ ಹೆಚ್ಚು ಸದೃಢವಾಗಿದೆ. ಎಲ್ಲರೂ ತಿಳಿದುಕೊಂಡಿರುವ ಹಾಗೇ ಕೆಲ ಪಂದ್ಯಗಳಿಂದ ಹೆಚ್ಚಿನ ಸ್ಕೋರ್ ಸುಲಭವಾಗಿ ಹರಿದು ಬರುವ ಸಾಧ್ಯತೆಗಳಿರುವುದರಿಂದ ಅದನ್ನ ನಿಯಂತ್ರಣ ಮಾಡಲು ಬೌಲಿಂಗ್ ವಿಭಾಗ ಹಾಗೂ ರನ್ ಸುಲಭವಾಗಿ ಗಳಿಕೆ ಮಾಡಲು ಬ್ಯಾಟಿಂಗ್ ವಿಭಾಗ ಕೆಲ ಯೋಜನೆ ಹಾಕಿಕೊಳ್ಳಲಾಗಿದೆ. ವಿಶ್ವಕಪ್ನಲ್ಲಿ ಅದನ್ನ ಜಾರಿಗೆ ತರಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು. ವಿಶ್ವಕಪ್‌ನಂತಹ ಅತೀ ದೊಡ್ಡ ಟೂರ್ನಿಗಳಲ್ಲಿ ಒತ್ತಡ ನಿರ್ವಹಣೆ ಬಹಳ ಮುಖ್ಯ ಅಂತಾ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಮಾತನಾಡಿರುವ ಕೋಚ್ ರವಿ ಶಾಸ್ತ್ರಿ, ವಿಶ್ವಕಪ್ನಲ್ಲಿ ಧೋನಿ ಹೆಚ್ಚಿನ ಪಾತ್ರ ನಿರ್ವಹಿಸಲಿದ್ದಾರೆ. ಅವರ ಸ್ಥಾನವನ್ನ ತುಂಬುವ ಬೇರೆ ಯಾವುದೇ ಆಟಗಾರ ಸದ್ಯಕ್ಕಿಲ್ಲ. ಕೆಲ ಕಠಿಣ ಸಂದರ್ಭಗಳಲ್ಲಿ ಅವರು ತೆಗೆದಿಕೊಳ್ಳುವ ನಿರ್ಧಾರ ಮಹತ್ವವಾಗಿರುತ್ತವೆ. 2015ರ ವಿಶ್ವಕಪ್ಗೆ ಹೋಲಿಕೆ ಮಾಡಿದಾಗ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಂತಹ ತಂಡಗಳೂ ಈಗ ಬಲಶಾಲಿಯಾಗಿವೆ ಎಂದು ತಿಳಿಸಿದರು.