ಬೆಂಗಳೂರು: ಮುಂಗಾರು ಮಳೆ ಜೂನ್ ಮೊದಲ ವಾರ ಅಂದರೆ 5-6ರಂದು ರಾಜ್ಯಕ್ಕೆ ಪ್ರವೇಶಿಸಲಿದೆ. ಮುಂಗಾರು ಮಳೆಗೆ ಕಾರಣ ಆಗುವ ನೈರುತ್ಯ ಮಾನ್ಸೂನ್ ಮಾರುತವು ಮೇ 31ಕ್ಕೆ ಕೇರಳ ಪ್ರವೇಶಿಸಲಿದ್ದು, ಜೂನ್ ಮೊದಲ ವಾರ ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಾನ್ಸೂನ್ ಮಾರುತಗಳ ತೀವ್ರತೆಯ ಆಧಾರದ ಮೇಲೆ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶ ತಿಳಿಯಲಿದೆ. ರಾಜ್ಯದ ಕರಾವಳಿ ಭಾಗಕ್ಕೆ ಜೂನ್ ಮೊದಲ ವಾರದೊಳಗೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ. ಮೇ. 23ಕ್ಕೆ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದ್ದು, ಇದರ ಪ್ರಭಾವ ತೀವ್ರವಾದರೆ ಅರಬ್ಬಿ ಸಮುದ್ರದ ಮೋಡಗಳನ್ನು ಎಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಮುಂಗಾರು ಮಳೆಯ ಅವಧಿ ಸಾಮಾನ್ಯವಾಗಿ ಜೂನ್ನಿಂದ ಸೆಪ್ಟೆಂಬರ್ವರೆಗೆ ಇರಲಿದ್ದು, ಈ ಬಾರಿ ರಾಜ್ಯದಲ್ಲಿ ಸಾಧಾರಣ ಮಳೆಯಾಗಲಿದೆ. ರಾಜ್ಯದ ಶೇ. 70ರಷ್ಟು ಭಾಗದಲ್ಲಿ ವಾಡಿಕೆ ಅಥವಾ ಅದಕ್ಕಿಂತ ಹೆಚ್ಚು, ಇನ್ನುಳಿದ ಶೇ. 30 ಭಾಗದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬಂಗಾಳ ಕೊಲ್ಲಿಯಲ್ಲಿ ಮೇ. 20ರಂದು ಮಾನ್ಸೂನ್ ಮಾರುತಗಳು ಬೀಸಲಿದ್ದು, 21ಕ್ಕೆ ಅಂಡಮಾನ್- ನಿಕೋಬಾರ್ ದ್ವೀಪ ಪ್ರದೇಶ ಮತ್ತು ಬಂಗಾಳ ಕೊಲ್ಲಿಯ ದಕ್ಷಿಣ ಭಾಗಗಳಲ್ಲಿ ಮಳೆ ಬೀಳಲಿದೆ. ಹೀಗಾಗಿ ಈ ದ್ವೀಪಗಳಲ್ಲಿ ಮೇ 21ರ ವೇಳೆಗೆ ಮಾನ್ಸೂನ್ ಮಾರುತಗಳ ಪ್ರವೇಶವಾಗಲಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದರು.
ಇನ್ನು ತೌಕ್ತೆ ಚಂಡಮಾರುತದ ಬೆನ್ನಲ್ಲೇ ದೇಶಕ್ಕೆ ಇನ್ನೊಂದು ಚಂಡಮಾರುತದ ಭೀತಿ ಉಂಟಾಗಿದ್ದು, ಮೇ. 26ರ ವೇಳೆಗೆ ಪಶ್ಚಿಮ ಬಂಗಾಳ ಹಾಗೂ ಒಡಿಶಾ ಕರಾವಳಿಗೆ ಯಾಸ್ ಸೈಕ್ಲೋನ್ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.