ನವದೆಹಲಿ:ಕಳೆದ ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಖಾಸಗಿ ಚಾನಲ್ವೊಂದಕ್ಕೆ ನೀಡಿದ್ದ ಸಂದರ್ಶನದ ಕೆಲ ವಿಷಯಗಳು ಇದೀಗ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.
ಸಂದರ್ಶನದ ವೇಳೆ ಮೋದಿ ನಾನು 1988ರಲ್ಲೇ ಡಿಜಿಟಲ್ ಕ್ಯಾಮೆರಾ ಬಳಕೆ ಮಾಡಿ ಎಲ್ಕೆ ಅಡ್ವಾಣಿ ಅವರ ಕಲರ್ ಫೋಟೋ ಕ್ಲಿಕ್ ಮಾಡಿದ್ದೆ ಹಾಗೂ ಇಮೇಲ್ ಬಳಕೆ ಮಾಡಿರುವೆ ಎಂದು ಹೇಳಿಕೊಂಡಿದ್ದರು. ಇದೀಗ ಅದೇ ವಿಷಯವನ್ನಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.
ನೆಟ್ಟಿಗರು ಇದೇ ವಿಷಯವನ್ನಿಟ್ಟುಕೊಂಡು 1988ರಲ್ಲಿ ಡಿಜಿಟಲ್ ಕ್ಯಾಮೆರಾ ಮತ್ತು ಇಮೇಲ್ ಎಲ್ಲಿತ್ತು? ಭಾರತಕ್ಕೆ ಮೇಲ್ ಪರಿಚಯವಾಗಿದ್ದೇ 1995ರಲ್ಲಿ. ಇನ್ನು ಡಿಜಿಟಲ್ ಕ್ಯಾಮೆರಾ 1990ರಲ್ಲಿ ಪರಿಚಯಗೊಂಡಿದ್ದು, ನೀವು ನಿಜಕ್ಕೂ ಸಾಮಾನ್ಯ ವ್ಯಕ್ತಿ ಅಲ್ಲ ಎಂದು ಅನೇಕರು ಬರೆದುಕೊಂಡಿದ್ದಾರೆ. 1988ರಲ್ಲಿ ಮೋದಿ ಬಳಿ ಪರ್ಸ್ ಇರಲಿಲ್ಲ ಯಾಕಂದ್ರೆ ಅವರ ಬಳಿ ಹಣ ಇರಲಿಲ್ಲ ಆದ್ರೆ, ಡಿಜಿಟಲ್ ಕ್ಯಾಮೆರಾ ಇತ್ತು ಎಂದು ಕೆಲವರು ಕಾಲೆಳೆದಿದ್ದಾರೆ.