ನವದೆಹಲಿ: ನರೇಂದ್ರ ಮೋದಿ ಪ್ರಧಾನಿ ಪದಗ್ರಹಣದಲ್ಲಿ ಸಂಪುಟ ಸೇರಿದ ಅಚ್ಚರಿಯ ಮುಖ ಸುಬ್ರಹ್ಮಣ್ಯಂ ಜೈಶಂಕರ್.
ಸುಬ್ರಹ್ಮಣ್ಯಂ ಜೈಶಂಕರ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ವೇಳೆಯಲ್ಲಿ ಯಾವ ಖಾತೆ ದೊರೆಯಲಿದೆ ಎನ್ನುವ ಸಹಜ ಕುತೂಹಲ ಎಲ್ಲರಲ್ಲಿ ಮನೆ ಮಾಡಿತ್ತು. ಆ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ.
ಮೋದಿ ಸಂಪುಟದಿಂದ ಹೊರಗುಳಿದ ಸುಷ್ಮಾ,ಭಾವುಕರಾದ ನೆಟಿಜನ್ಸ್!
ಕಳೆದ ಐದು ವರ್ಷದಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ ಸುಷ್ಮಾ ಸ್ವರಾಜ್ ಸ್ಥಾನವನ್ನು ಇದೀಗ ಸುಬ್ರಹ್ಮಣ್ಯಂ ಜೈಶಂಕರ್ ಅಲಂಕರಿಸಿದ್ದಾರೆ.
ಹೊಸತನಕ್ಕೆ ನಾಂದಿ ಹಾಡಿದ ಮೋದಿ:
ಕೇಂದ್ರ ಸಚಿವ ಸಂಪುಟದ ಇತಿಹಾಸದಲ್ಲೇ ಮೊದಲ ಬಾರಿಗೆ ವಿದೇಶಾಂಗ ಕಾರ್ಯದರ್ಶಿ ಓರ್ವ ವಿದೇಶಾಂಗ ಖಾತೆಯನ್ನು ವಹಿಸಿಕೊಂಡಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ಹೊಸತನಕ್ಕೆ ನಾಂದಿ ಹಾಡಿದ್ದಾರೆ.
ಯಾರು ಸುಬ್ರಹ್ಮಣ್ಯಂ ಜೈಶಂಕರ್..?
ರಾಜತಾಂತ್ರಿಕ ನೆಲೆಯಲ್ಲಿ ಸುಬ್ರಹ್ಮಣ್ಯಂ ಜೈಶಂಕರ್ ಮೂರು ದಶಕಗಳ ಸುದೀರ್ಘ ಅನುಭವ ಹೊಂದಿದ್ದಾರೆ. ಸಿಂಗಾಪುರದಲ್ಲಿ ಹೈ ಕಮೀಷನರ್, ಚೀನಾ ಹಾಗೂ ಅಮೆರಿಕಾದಲ್ಲಿ ಭಾರತದ ರಾಯಭಾರಿಯಾಗಿ ಅವರು ಕಾರ್ಯ ನಿರ್ವಹಿಸಿದ್ದಾರೆ.
ಭಾರತ ಹಾಗೂ ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದದಲ್ಲಿ ಸುಬ್ರಹ್ಮಣ್ಯಂ ಜೈಶಂಕರ್ ಪ್ರಮುಖ ಪಾತ್ರ ವಹಿಸಿದ್ದರು.
ಪಾಕ್ ವಿರುದ್ಧ ಜೈಶಂಕರ್ ಖಡಕ್ ನಿಲುವು:
ಕಳೆದ ಐದು ವರ್ಷದಲ್ಲಿ ಪಾಕಿಸ್ತಾನದ ಗಡಿ ತಂಟೆ ಎಲ್ಲೆ ಮೀರಿತ್ತು. ಪಠಾಣ್ಕೋಟ್, ಉರಿ ಹಾಗೂ ಪುಲ್ವಾಮಾ ಉಗ್ರದಾಳಿಗಳು ಪಾಕ್ ನೆಲದಿಂದಲೇ ಕಾರ್ಯಗತವಾಗಿತ್ತು ಎನ್ನುವುದು ಬಹಿರಂಗ ಸತ್ಯ. ಈ ಎಲ್ಲ ಸಂದರ್ಭದಲ್ಲಿ ಸುಷ್ಮಾ ಸ್ವರಾಜ್ ಖಡಕ್ಕಾಗಿ ಪಾಕ್ ವಿರುದ್ಧ ಮಾತನಾಡಿದ್ದರು.
ಸದ್ಯ ಸುಷ್ಮಾ ಹುದ್ದೆಗೆ ಬಂದಿರುವ ಸುಬ್ರಹ್ಮಣ್ಯಂ ಜೈಶಂಕರ್ ಸಹ ಇದೇ ಖಡಕ್ ನಿಲುವು ಹೊಂದಿದ್ದಾರೆ. ಕಣಿವೆ ರಾಜ್ಯದ ಗಡಿ ಸಮಸ್ಯೆ ಕುರಿತಾಗಿ ಪಾಕ್ ಸಭ್ಯವಾಗಿ ವರ್ತಿಸಬೇಕು ಎಂದಿದ್ದರು. ಪಾಕಿಸ್ತಾನ ಉತ್ತಮವಾಗಿ ವರ್ತಿಸಿದರೆ ಭಾರತ ಎಲ್ಲ ರೀತಿಯ ಸಹಾಯ ಮಾಡುವುದಾಗಿ ಜೈಶಂಕರ್ ಈ ಹಿಂದೆ ಹಲವಾರು ಬಾರಿ ಹೇಳಿದ್ದರು.
ಮೋದಿ ಹಾಗೂ ಅಮಿತ್ ಶಾ ಅವರ ಪಕ್ಕಾ ಲೆಕ್ಕಾಚಾರದಂತೆ ಸುಷ್ಮಾ ಹುದ್ದೆಗೆ ಸಮರ್ಥ ಉತ್ತರಾಧಿಕಾರಿಯ ಆಗಮನವಾಗಿದೆ. ಪುಲ್ವಾಮಾ ಉಗ್ರದಾಳಿಯ ಬಳಿಕ ಸಂಪೂರ್ಣ ಹದಗೆಟ್ಟಿರುವ ಭಾರತ ಹಾಗೂ ಪಾಕ್ ನಡುವಿನ ಸಂಬಂಧ ಜೈಶಂಕರ್ ಆಗಮನದ ಬಳಿಕ ಹೇಗಿರಲಿದೆ ಎನ್ನುವ ಕುತೂಹಲ ಮೂಡಿದೆ.