ಚಾಮರಾಜನಗರ: ಬಿಜೆಪಿ ಸರ್ಕಾರ ಗೊಂದಲದ ಗೂಡಾಗಿದ್ದು, ಕಳ್ಳ-ಕಳ್ಳರು ಸಂತೆ ಸೇರಿದ ಹಾಗೆ ಬಿಜೆಪಿ ಸರ್ಕಾರ ರಚನೆಯಾಗಿದೆ ಎಂದು ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಎಚ್. ವಿಶ್ವನಾಥ್ ಬುದ್ಧಿವಂತರಿದ್ದು, ಕಣ್ಣಾರೆ ಕಂಡಿರುವುದಕ್ಕೆ ಹೇಳುತ್ತಿದ್ದಾರೆ. ಸಿಎಂ ಪುತ್ರ ವಿಜಯೇಂದ್ರ 20 ಸಾವಿರ ಕೋಟಿ ಭ್ರಷ್ಟಾಚಾರ ನಡೆಸಿರುವುದು ಸತ್ಯ. ಕೊರೊನಾ ಸಂಕಷ್ಟದ ಕಾಲದಲ್ಲಿ ಸರ್ಕಾರ ಗೊಂದಲದ ಗೂಡಾಗಿದ್ದು ಭ್ರಷ್ಟಾಚಾರದ ಬಗ್ಗೆ ತನಿಖೆ ಆಗಲೇಬೇಕಿದೆ ಎಂದು ಒತ್ತಾಯಿಸಿದರು.
ಅಭಿವೃದ್ಧಿ ಇವರ ಕೈಯಲ್ಲಿ ಆಗಲ್ಲ, ಶಾಸಕರು, ಮಂತ್ರಿಗಳಿಗೆ ಅವರ ಪಕ್ಷದವರನ್ನು ಕಂಡರೆ ಅವರಿಗೇ ಆಗದ ಪರಿಸ್ಥಿತಿ ಇದೆ. ಯಡಿಯೂರಪ್ಪ ಮುಂದೆ ಮಾತ್ರ ಸಿಎಂ ಸರಿ ಎನ್ನುತ್ತಾರೆ ಹಿಂದೆ ವಿರೋಧಿಸುತ್ತಾರೆ. ಸರ್ಕಾರ ನಿಷ್ಕ್ರಿಯವಾಗಿದ್ದು ಅರಾಜಕತೆ ಸೃಷ್ಟಿಯಾಗುವ ಮುನ್ನ ರಾಷ್ಟ್ರಪತಿ ಆಳ್ವಿಕೆ ಹೇರುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಸರ್ಕಾರವನ್ನು ಪ್ರಧಾನಿ ನರೇಂದ್ರ ಮೋದಿ ಟೆನ್ ಪರ್ಸೆಂಟ್ ಸರ್ಕಾರ ಎನ್ನುತ್ತಿದ್ದರು. ಈಗ ಅವರ ಮಂತ್ರಿಗಳು ಎಷ್ಟು ಪರ್ಸೆಂಟ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಅವರೇ ಹೇಳಲಿ ಎಂದು ಟಾಂಗ್ ಕೊಟ್ಟರು.