ಬಾಗಲಕೋಟೆ:ಬ್ಲ್ಯಾಕ್ ಫಂಗಸ್ ದೊಡ್ಡ ರೋಗವಲ್ಲ. ಈ ಹಿಂದೆಯೇ ರೋಗ ಇತ್ತು, ಮುಂದೆಯೂ ಇರುತ್ತದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬ್ಲ್ಯಾಕ್ ಫಂಗಸ್ ಸ್ಟಿರಾಯ್ಡ್ ತೆಗೆದುಕೊಂಡವರು ಮತ್ತು ಡಯಾಬಿಟಿಸ್ ಇದ್ದವರಿಗೆ ಬೇಗ ಬರುತ್ತದೆ. ಇವರಲ್ಲಿ ಹೆಚ್ಚು ತೊಂದರೆ ಕಂಡು ಬರುತ್ತಿದೆ. ಇದು ನಿರಂತರವಾದದ್ದು ಅಲ್ಲ. ಕೋವಿಡ್ ಜೊತೆ ಇಂದು ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಗುಣಪಡಿಸಲು ಬೇಕಾದ ವ್ಯವಸ್ಥೆಯನ್ನು ಮಾಡುತ್ತೇವೆ ಎಂದರು.
ಬಾಗಲಕೋಟೆ ಜಿಲ್ಲೆಯಲ್ಲಿ 20 ಜನ ಬ್ಲ್ಯಾಕ್ ಫಂಗಸ್ನಿಂದ ಬಳಲುತ್ತಿದ್ದಾರೆ. ಅವರಿಗಾಗಿ ಓಷಧಿ ಬರುತ್ತಿದೆ. ಬಂದ ತಕ್ಷಣ ನೀಡುತ್ತೇವೆ. ಈಗ ಪಯಾ೯ಯವಾಗಿ ಔಷಧೋಪಚಾರ ನಡೆಯುತ್ತಿದೆ. ಫಂಗಸ್ನಿಂದ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಸಚಿವ ಕತ್ತಿ ಮಾಹಿತಿ ನೀಡಿದರು.
ಬ್ಲ್ಯಾಕ್ ಫಂಗಸ್ ಕುರಿತು ಮಾತನಾಡಿದ ಸಚಿವ ಉಮೇಶ್ ಕತ್ತಿ ಇದೇ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರತಿಪಕ್ಷದ ನಾಯಕರಿಗೆ ಬೇರೆ ಕೆಲಸ ಇಲ್ಲ. ಹಕ್ಕುಚ್ಯುತಿಯಲ್ಲಿ ಏನು ಬರುತ್ತದೆ ನೋಡೋಣ. ನಾನು ಎಂಎಲ್ಎ ಆಗಿ 9 ಬಾರಿ ಆಯ್ಕೆಯಾಗಿದ್ದೇನೆ. ನನಗೂ ಗಮನಕ್ಕೆ ಬಂದಿಲ್ಲ. ಏನಾಗುತ್ತದೆ ನೋಡೋಣ ಎಂದರು.
ಕೋವಿಡ್ ಸಂದರ್ಭದಲ್ಲಿ ಹಕ್ಕುಚ್ಯುತಿ ಬೇಡ ಅಂತ ಮನವಿ ಮಾಡಿದ್ದೇವೆ. ಅವರು ಹಕ್ಕು ಚ್ಯುತಿ ಮಾಡೇ ಮಾಡ್ತೀವಿ ಅಂದ್ರೆ ಮಾಡಲಿ. ಅದರ ಮೇಲೆ ಏನು ಅಭಿಪ್ರಾಯ ಬರುತ್ತದೆ ನೋಡೋಣ. ಅದು ಅವರಿಗೆ ಬಿಟ್ಟಿದ್ದು ಎಂದರು.