ಬೆಂಗಳೂರು: ಸಾರ್ವಜನಿಕ ಬದುಕನ್ನು ತಲ್ಲಣಗೊಳಿಸಿರುವ ಕೊರೊನಾ ಸೋಂಕು ಸೇರಿದಂತೆ ಹಲವು ಕಾರಣಗಳಿಂದ ಮೃತಪಟ್ಟ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಕರ ಅವಲಂಬಿತರಿಗೆ ಅನುಕಂಪದ ನೌಕರಿಯ ಆದೇಶ ಪತ್ರಗಳನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ವಿತರಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೊರೊನಾದಿಂದ ಮೃತಪಟ್ಟ 130 ಮಂದಿ ಶಿಕ್ಷಕರ ಹತ್ತಿರದ ರಕ್ತ ಸಂಬಂಧಿಗಳಿಗೆ ಸಾಂಕೇತಿಕವಾಗಿ ಅನುಕಂಪದ ನೌಕರಿಯ ನೇಮಕಾತಿ ಪತ್ರಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಕೋವಿಡ್ ಸೋಂಕಿನಿಂದ ನಮ್ಮ ಶಿಕ್ಷಣ ಪರಿವಾರದ ಅನೇಕ ಮಂದಿ ಶಿಕ್ಷಕ ಬಂಧುಗಳು ನಮ್ಮನ್ನು ಅಗಲಿದ್ದು, ನಮ್ಮ ನಾಡಿಗೆ ಅಪಾರ ನಷ್ಟವಾಗಿದೆ. ಮೃತ ಶಿಕ್ಷಕರ ಕುಟುಂಬಗಳಷ್ಟೇ ಅಲ್ಲ ನಮ್ಮ ನಾಡಿನ ಶಾಲಾ ಮಕ್ಕಳೂ ತಮ್ಮ ನೆಚ್ಚಿನ ಹಾಗೂ ಮೆಚ್ಚಿನ ಶಿಕ್ಷಕರನ್ನು ಕಳೆದುಕೊಂಡ ನೋವಿನಿಂದ ಇನ್ನೂ ಹೊರಬಂದಿಲ್ಲ. ಇಂತಹ ಸಂದರ್ಭದಲ್ಲಿ ಶಿಕ್ಷಕರ ಕುಟುಂಬಗಳಿಗೆ ತಕ್ಷಣವೇ ಸ್ಪಂದಿಸುವ ಸಲುವಾಗಿ ಅನುಕಂಪದ ನೇಮಕಾತಿ ನೀಡಲು ಇಲಾಖೆ ಮುಂದಾಗಿದೆ ಎಂದರು.