ಕರ್ನಾಟಕ

karnataka

ETV Bharat / briefs

ಮನ್ಸೂರ್​ನಿಂದ ಸಾಲ ಪಡೆದಿರುವುದು ಸಾಬೀತು ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್​​​ - undefined

ಜನರಿಗೆ ವಂಚನೆ ಮಾಡಿರುವ ಐಎಂಎ ಜ್ಯುವೆಲರ್ಸ್ ಹಾಗೂ ಅದರ ಮಾಲೀಕ ಮನ್ಸೂರ್ ಖಾನ್​ನಿಂದ ಯಾವುದೇ ರೀತಿಯ ಸಾಲ ಪಡೆದಿಲ್ಲ. ಒಂದು ವೇಳೆ ಸಾಲ ಪಡೆದಿದ್ದೇನೆ ಎನ್ನುವುದನ್ನು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಚಿವ ಜಮೀರ್​ ಅಹಮದ್ ಮಾತನಾಡಿದರು.

By

Published : Jun 12, 2019, 8:31 PM IST

ಬೆಂಗಳೂರು: ಜನರಿಗೆ ವಂಚನೆ ಮಾಡಿರುವ ಐಎಂಎ ಜ್ಯುವೆಲರ್ಸ್ ಹಾಗೂ ಅದರ ಮಾಲೀಕ ಮನ್ಸೂರ್ ಖಾನ್​ನಿಂದ ಯಾವುದೇ ರೀತಿಯ ಸಾಲ ಪಡೆದಿಲ್ಲ. ಒಂದು ವೇಳೆ ಸಾಲ ಪಡೆದಿದ್ದೇನೆ ಎನ್ನುವುದನ್ನು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹಮದ್ ಖಾನ್​ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಲ್ಲಿ ಯಾರೂ ಹರಿಶ್ಚಂದ್ರರು ಇಲ್ಲ. ತಪ್ಪು ಮಾಡಿದ್ದರೆ ಒಪ್ಪಿಕೊಳ್ಳಬೇಕು. ಆದರೆ ನನ್ನ ವಿಚಾರದಲ್ಲಿ ಸುಳ್ಳು ಮಾಹಿತಿ ಪ್ರಸಾರ ಆಗುತ್ತಿದೆ. ನಾನು ರಿಚ್ಮಂಡ್ ಟೌನ್​ನಲ್ಲಿ ನನ್ನ ಆಸ್ತಿಯನ್ನು ಮನ್ಸೂರ್​ಗೆ ಮಾರಿದ್ದೇನೆ.

9 ಕೋಟಿ 38 ಲಕ್ಷಕ್ಕೆ ಆಸ್ತಿ ಮಾರಿದ್ದೇನೆ. ಅದರಲ್ಲಿ 5 ಕೋಟಿ ರೂಪಾಯಿ ಆರ್​.ಟಿ.ಜಿ.ಎಸ್ ಮೂಲಕ‌ ನನಗೆ ಹಣ ಪಾವತಿಯಾಗಿದೆ. ಎಲ್ಲವೂ ಪಾರದರ್ಶಕ ವ್ಯವಹಾರ ಮಾಡಿದ್ದೇನೆ. ನನ್ನ ಬಳಿ ಸೇಲ್ ಡೀಡ್ ಇದೆ. ನಾನು ಮನ್ಸೂರ್​ನಿಂದ ಸಾಲ ತೆಗೆದುಕೊಂಡಿಲ್ಲ. ನನ್ನ ಆಸ್ತಿಯನ್ನೇ ಮಾರಾಟ ಮಾಡಿದ್ದೇನೆ. ಒಂದು ವೇಳೆ ನಾನು ಐಎಂಎಯ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಿದ್ದರೆ ಯಾವುದೇ ಶಿಕ್ಷೆ ಅನುಭಸಲು ಸಿದ್ಧ. ರಾಜಕೀಯ ನಿವೃತ್ತಿ ಬೇಕಿದ್ದರೂ ಪಡೆಯುತ್ತೇನೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಚಿವ ಜಮೀರ್​ ಅಹಮದ್ ಖಾನ್​

ಮಾಧ್ಯಮಗಳಲ್ಲೂ ಮನ್ಸೂರ್ ಕೋಟಿ ಕೋಟಿ ರೂಪಾಯಿ ಜಾಹೀರಾತು ಕೊಟ್ಟಿದಾನೆ. ಹಾಗಿದ್ದರೆ ಮಾಧ್ಯಮಗಳಿಗೂ ಮನ್ಸೂರ್​ಗೂ ಸಂಬಂಧ ಇದೆ ಅಂತ ಅರ್ಥಾನಾ? ಹಾಗೆಯೇ ನನಗೂ ಮನ್ಸೂರ್ ಮೇಲೆ ಅನುಮಾನ ಇರಲಿಲ್ಲ. ಹಾಗಾಗಿ ಅವನೊಂದಿಗೆ ವ್ಯವಹಾರ ಇಟ್ಟುಕೊಂಡಿದ್ದೆ. ನನಗೂ ಇತ್ತೀಚೆಗೆ ರಂಜಾನ್​ ವೇಳೆ ಮನ್ಸೂರ್ ಬಗ್ಗೆ ಗೊತ್ತಾಯ್ತು. 2017ಕ್ಕೂ ಮೊದಲು ಅವನೊಂದಿಗೆ ಯಾವುದೇ ನಂಟು ಇರಲಿಲ್ಲ. ಆಸ್ತಿ ಮಾರಾಟದ ಸಲುವಾಗಿಯೇ ಪರಿಚಯ ಆಯಿತು. ಈಗ ಅಂತಹ ವ್ಯಕ್ತಿಗೆ ಆಸ್ತಿ ಮಾರಾಟ ಮಾಡಿದೆನಲ್ಲಾ ಎಂದು ಬೇಸರವಾಗುತ್ತಿದೆ ಎಂದರು.

ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಬಗ್ಗೆ ಸಿಎಂ ತೀರ್ಮಾನಿಸುತ್ತಾರೆ. ಸದ್ಯಕ್ಕೆ ನಮ್ಮ ಪೊಲೀಸರು ತನಿಖೆ ಮಾಡಲಿ. ಇದರ ತನಿಖೆ ಸರಿಯಾಗಿ ಆಗಲಿಲ್ಲ ಅಂದರೆ ಸಿಬಿಐಗೆ ಕೊಡಲಿ. ಈಗಲೇ ಸಿಬಿಐ ಎಂದರೆ ನಮ್ಮ ಪೊಲೀಸರನ್ನು ನಾವೇ ನಂಬದಂತಾಗುತ್ತದೆ.

ಮೊದಲು ನಮ್ಮ ಅಧಿಕಾರಿಗಳು ತನಿಖೆ ನಡೆಸಲಿ. ನನಗೆ ಬಂದ ಮಾಹಿತಿ ಪ್ರಕಾರ ಮನ್ಸೂರ್​ಗೆ ಸಾಕಷ್ಟು ಬೇನಾಮಿ ಆಸ್ತಿ ಇದೆ. ಎಲ್ಲವನ್ನು ಪತ್ತೆ ಹಚ್ಚಬೇಕು. ಇದನ್ನು ನಮ್ಮ ಪೊಲೀಸರು ಮಾಡಲಿದ್ದಾರೆ. ನಂತರ ಆಸ್ತಿಯನ್ನು ಕಾನೂನು ರೀತಿ ಮಾರಾಟ ಮಾಡಿ ಹೂಡಿಕೆದಾರರಿಗೆ ಮರಳಿಸುವ ಕೆಲಸ ಮಾಡಲಾಗುತ್ತದೆ ಎಂದರು.

ಮನ್ಸೂರ್ ಆಡಿಯೋದಲ್ಲಿ ರೋಷನ್ ಬೇಗ್ ವಿಚಾರ ಪ್ರಸ್ತಾಪವಾಗಿದೆ. ಆದರೆ ರೋಷನ್ ಬೇಗ್ ನಮ್ಮ ಪಕ್ಷದ ನಾಯಕ. ಅವರ ಹೆಸರು ಕೇಳಿ ಬಂದಿರುವ ಬಗ್ಗೆ ಮೊದಲು ತನಿಖೆ ಆಗಲಿ. ಅದು ಫೇಕ್ ಆಡಿಯೋ ಇರಬಹುದು. ತನಿಖೆ ಬಳಿಕ ರೋಷನ್ ಬೇಗ್ ಸಂಪರ್ಕದ ಬಗ್ಗೆ ಗೊತ್ತಾಗುತ್ತದೆ ಎಂದು ಬೇಗ್ ಪರ ಬ್ಯಾಟಿಂಗ್ ಮಾಡಿದರು.

ನನಗೆ ವಂಚನೆ ಬಗ್ಗೆ ವಾಟ್ಸಪ್ ಮೆಸೇಜ್​ಗಳ ಮೂಲಕ ಗೊತ್ತಾಗಿತ್ತು.‌ ಹಾಗಾಗಿ ನಾನು ಕಳೆದ ಮೇ 26ರಂದು ಮನ್ಸೂರ್ ಖಾನ್ ಭೇಟಿ ಮಾಡಿ ಚರ್ಚೆ ನಡೆಸಿದ್ದೆ. ಹೂಡಿಕೆ ಹಣ ವಂಚನೆ ಬಗ್ಗೆ ಚರ್ಚೆ ನಡೆಸಿದ್ದೆ. ಹಾಗೆಲ್ಲ ಏನೂ ಇಲ್ಲ. ನನ್ನ ಬಳಿ ಸಾಕಷ್ಟು ಆಸ್ತಿ ಇದೆ ಅಂದ್ರು. ನನಗೆ ಅವರು ಹೀಗೆ ಓಡಿ ಹೋಗ್ತಾರೆ ಅಂತ ಗೊತ್ತಾಗ್ಲಿಲ್ಲ. ಅದೇ ದಿನ ಅಲೋಕ್ ಕುಮಾರ್ ಸಹ ಮನ್ಸೂರ್ ಖಾನ್ ಕರೆಸಿ ಚರ್ಚೆ ನಡೆಸಿದ್ದರು. ಅವರಿಗೂ ಅನುಮಾನ ಬರಲಿಲ್ಲ ಎಂದು ಜಮೀರ್ ತಿಳಿಸಿದರು.

ಮನ್ಸೂರ್​ಗೆ ಕೈ ಮುಗೀತಿನಿ ಬನ್ನಿ. ನಿಮ್ಮ ರಕ್ಷಣೆ ನಮ್ಮ ಜವಾಬ್ದಾರಿ. ಯಾರಿಗೆ ಹಣ ಕೊಟ್ಟಿದ್ದೀರಿ ಹೇಳಿ. ಅವರಿಂದ ವಸೂಲಿ ‌ಮಾಡಿ ಜನರಿಗೆ ಕೊಡೋಣ. ಎಲ್ಲಿದೀರ ಬಂದು ಬಡವರ ಹಣ ಕೊಡಿ ಎಂದು ಜಮೀರ್ ಕೈ ಮುಗಿದರು. ಆಗ ವಂಚಕನಿಗೆ ಕೈ ಮುಗಿದು ಸಚಿವ ಸ್ಥಾನದ ಘನತೆ ಕಳೆಯುತ್ತಿದ್ದೀರಲ್ಲ ಎಂದು ಮಾಧ್ಯಮ ಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ, ಎಚ್ಚೆತ್ತುಕೊಂಡ ಸಚಿವ ಜಮೀರ್, ಜನರ ಕಷ್ಟ ನೋಡಿ ಕೈ ಮುಗಿದೆ ಅಷ್ಟೇ. ಆತ ಸಿಕ್ಕರೆ ರಾಜಕಾರಣಿಗಳಿಗೆ, ಪೊಲೀಸರಿಗೆ, ಅಧಿಕಾರಿಗಳಿಗೆ ಹಣ ಕೊಟ್ಟ ಬಗ್ಗೆ, ಪಾರ್ಟಿ ಫಂಡ್ ಕೊಟ್ಟಿದ್ದರೆ ಅದೂ ಕೂಡ ಹೊರಗೆ ಬರಲಿದೆ. ಅದಕ್ಕಾಗಿ ಮನವಿ ಮಾಡುತ್ತಿದ್ದೇನೆ ಎಂದು ಸಮಜಾಯಿಷಿ ನೀಡಿದರು.

For All Latest Updates

TAGGED:

ABOUT THE AUTHOR

...view details