ಮಂಡ್ಯ:ಮಾಜಿ ಸ್ಪೀಕರ್ ಕೆ.ಆರ್ ಪೇಟೆ ಕೃಷ್ಣ ಅವರ ನಿಧನಕ್ಕೆ ಸಿಎಂ ಬಿಎಸ್ವೈ, ಮಾಜಿ ಪ್ರಧಾನಿ ದೇವೇಗೌಡ, ಸಂಸದೆ ಸುಮಲತಾ, ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಸೇರಿದಂತೆ ಗಣ್ಯರು ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ವಿಧಾನಸಭೆಯ ಮಾಜಿ ಸ್ಪೀಕರ್, ಮಾಜಿ ಸಚಿವರು, ಮಾಜಿ ಸಂಸದರಾದ ಕೆ. ಆರ್. ಪೇಟೆಯ ಕೃಷ್ಣ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ನೋವುಂಟಾಯಿತು ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಈ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಸಿಎಂ ಸಂತಾಪ : ಜನಾನುರಾಗಿ ನಾಯಕನಾಗಿದ್ದ ಕೃಷ್ಣ ಅವರು ತಾಲೂಕು ಬೋರ್ಡು ಸದಸ್ಯರಾಗಿ, ಶಾಸಕರಾಗಿ, ಸಚಿವರಾಗಿ ಹಾಗೂ ಸಂಸದರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ವಿಧಾನಸಭೆಯ ಸ್ಪೀಕರ್ ಆಗಿ ಸಂಸದೀಯ ಮೌಲ್ಯಗಳನ್ನು ಎತ್ತಿ ಹಿಡಿದವರು ಎಂದು ಮುಖ್ಯಮಂತ್ರಿಗಳು ಸ್ಮರಿಸಿದ್ದಾರೆ.
ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ, ಕುಟುಂಬವರ್ಗ ಹಾಗೂ ಅಭಿಮಾನಿಗಳಿಗೆ ಈ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ('ಮಂಡ್ಯದ ಗಾಂಧಿ ' ಎಂದೇ ಹೆಸರು ಗಳಿಸಿದ್ದ ಮಾಜಿ ಸ್ಪೀಕರ್ ಕೃಷ್ಣ ರಾಜ್ಯ ಕಂಡ ಅಪರೂಪದ ರಾಜಕಾರಣಿ...!)
ಹೆಚ್ಡಿಕೆ ಸಂತಾಪ : ಸರಳ, ಸಜ್ಜನ ರಾಜಕಾರಣಿ, ಮಾಜಿ ಸ್ಪೀಕರ್ ಕೆ. ಆರ್. ಪೇಟೆ ಕೃಷ್ಣ ಅವರ ನಿಧನಕ್ಕೆ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಕಂಬನಿ ಮಿಡಿದಿದ್ದಾರೆ. ಅವರ ಅಗಲಿಕೆಯ ನೋವನ್ನು ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಡಿಸಿಎಂ ಕಂಬನಿ :ಕರ್ನಾಟಕ ಕಂಡ ಸಜ್ಜನ - ಸರಳ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ವಿಧಾನಸಭೆಯ ಮಾಜಿ ಸಭಾಧ್ಯಕ್ಷರಾದ ಕೆ.ಆರ್.ಪೇಟೆ ಕೃಷ್ಣ ಅವರ ನಿಧನಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಕಂಬನಿ ಮಿಡಿದಿದ್ದಾರೆ.
ರಾಜಕೀಯ ತಳಮಟ್ಟದಿಂದ ಜನ ನಾಯಕರಾಗಿ ಬೆಳೆದ ಕೃಷ್ಣ ಅವರು, ಅಸಾಧಾರಣ ಸಂಸದೀಯ ಪಟುವಾಗಿದ್ದರು. ಜನಪರವಾದ ಯಾವುದೇ ವಿಷಯದ ಬಗ್ಗೆ ಸಮರ್ಥವಾಗಿ ಚರ್ಚೆ ನಡೆಸುವುದು ಮಾತ್ರವಲ್ಲದೇ, ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದರು.
ಸುರೇಶ್ ಕುಮಾರ್,ಈಶ್ವರಪ್ಪ ಸಂತಾಪ:ಕೃಷ್ಣ ಅವರ ನಿಧನಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಸುಮಲತಾ ಟ್ವೀಟ್: ಮಾಜಿ ಸ್ಪೀಕರ್ ಕೃಷ್ಣ ಅವರ ನಿಧನಕ್ಕೆ ಸಂಸದೆ ಸುಮಲತಾ ಅಂಬರೀಶ್ ಸಂತಾಪ ಸೂಚಿಸಿದ್ದಾರೆ. ಸರಳ ಸಜ್ಜನ ರಾಜಕಾರಣಿ, ವಿಧಾನಸಭೆಯ ಮಾಜಿ ಸ್ಪೀಕರ್ ಕೃಷ್ಣ ಅವರು ನಮ್ಮನ್ನು ಅಗಲಿರುವುದು ಜಿಲ್ಲೆಗೆ ಮತ್ತು ರಾಜ್ಯಕ್ಕೆ ತುಂಬಲಾರದ ನಷ್ಟ ತಂದಿದೆ ಎಂದಿದ್ದಾರೆ.
ಆತ್ಮೀಯರು, ಹಿತೈಷಿಗಳು, ಮಾರ್ಗದರ್ಶಕರೂ ಆಗಿದ್ದ ಮಾಜಿ ಸ್ಪೀಕರ್ ಕೆ.ಆರ್ ಪೇಟೆ ಕೃಷ್ಣ ಅವರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ.
ಅತ್ಯುತ್ತಮ ಸಂಸದೀಯ ಪಟುವಾಗಿದ್ದರು. ಅವರು ಶಾಸಕರಾಗಿ ಸೇವೆ ಸಲ್ಲಿಸಿದ ಕ್ಷೇತ್ರದಲ್ಲಿ ನಾನೂ ಶಾಸಕನಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. ಸಚಿವನಾದ ಬಳಿಕ ಸಾಕಷ್ಟು ಬಾರಿ ಭೇಟಿಯಾಗಿ ಅವರಿಂದ ಮಾರ್ಗದರ್ಶನ ಪಡೆದಿದ್ದೇನೆ. ಇಂದು ಅನಾರೋಗ್ಯದಿಂದ ಕೆ.ಆರ್.ಪೇಟೆ ಕೃಷ್ಣ ಅವರು ನಮ್ಮನ್ನು ಅಗಲಿದ ಸುದ್ದಿ ತಿಳಿದು ತೀವ್ರ ಆಘಾತ ಉಂಟಾಗಿದೆ ಎಂದರು.
ವಿಧಾನಸಭೆಯ ಸ್ಪೀಕರ್ ಆಗಿ ಆ ಸ್ಥಾನದ ಘನತೆಯನ್ನು ಹೆಚ್ಚಿಸಿದ್ದರು. ಅವರ ಕಾರ್ಯವೈಖರಿಯೇ ನಮಗೆ ಆದರ್ಶ. ಮಂಡ್ಯದ ಗಾಂಧಿ ಎಂದೇ ಹೆಸರಾಗಿದ್ದ ಕೃಷ್ಣ ಅವರು ಮೂರು ಬಾರಿ ಶಾಸಕರಾಗಿ, ಒಂದು ಬಾರಿ ಸಂಸದರಾಗಿ ನಾಡಿಗೆ ಸೇವೆ ಸಲ್ಲಿಸಿದ್ದಾರೆ. ಎಸ್ ಆರ್ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವರಾಗಿಯೂ ಕೆಲಸ ಮಾಡಿದ್ದಾರೆ ಎಂದರು.