ಬೆಂಗಳೂರು:ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಸಚಿವ ಸಿ.ಪಿ.ಯೋಗೇಶ್ವರ್ ಹರಿಹಾಯ್ದಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ನನ್ನ ವಿಚಾರ ಎಲ್ಲಿ ಹೇಳಬೇಕೋ ಅಲ್ಲಿ ಹೇಳ್ತೀನಿ. ವರಿಷ್ಠರ ಮುಂದೆ ನನ್ನ ನೋವು ತೋಡಿಕೊಳ್ತೇನೆ. ನನ್ನ ಅಧಿಕಾರದಲ್ಲಿ ನನ್ನ ಮಗ ಮೂಗು ತೂರಿಸಿದ್ರೆ ಅದು ಸರಿಯಲ್ಲ. ಆದರೆ ರಾಜ್ಯದಲ್ಲಿ ಇದೇ ನಡೀತಿರೋದು. ಕೆಲವು ವಿಚಾರ ಹಂಚಿಕೊಳ್ಳಲು ಆಗಲ್ಲ. ನಾನೊಬ್ಬ ಸಚಿವ. ಇವತ್ತು ನನ್ನ ಸಚಿವಗಿರಿಯನ್ನು ನನ್ನ ಮಗ ಚಲಾಯಿಸಿದ್ರೆ ನಾನು ಒಪ್ಪಲ್ಲ. ನನ್ನ ಅಧಿಕಾರದಲ್ಲಿ ಬೇರೆಯವರು ಮೂಗು ತೂರಿಸೋದು ಇಷ್ಟವಿಲ್ಲ. ಇದನ್ನು ನಾನು ಸೂಕ್ಷ್ಮವಾಗಿ ಹೇಳಿದೀನಿ. ಅರ್ಥ ಮಾಡಿಕೊಳ್ಳಲಿ ಎಂದು ಬಿ.ವೈ.ವಿಜಯೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಸಿ.ಪಿ.ಯೋಗೇಶ್ವರ್ ಅಸಮಾಧಾನ ಮುಖ್ಯಮಂತ್ರಿಗಳ ಬದಲಾವಣೆ ನನ್ನ ಮೂಲ ಉದ್ದೇಶ ಅಲ್ಲ. ಅಷ್ಟೊಂದು ಶಕ್ತಿ ನನಗೆ ಇಲ್ಲ. ಆ ಅಭಿಪ್ರಾಯವೂ ನನಗೆ ಇಲ್ಲ. ದೆಹಲಿಗೆ ಹೋಗುತ್ತಿರುತ್ತೇನೆ, ಬರುತ್ತಿರುತ್ತೇನೆ. ಎಲ್ಲವನ್ನೂ ಮಾಧ್ಯಮಗಳ ಮುಂದೆ ಹೇಳವುದಿಲ್ಲ. ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ. ನನ್ನ ದೆಹಲಿ ಭೇಟಿ ಯಾಕೆ ಇಷ್ಟೊಂದು ಸುದ್ದಿಯಾಯ್ತೋ ಗೊತ್ತಿಲ್ಲ. ನಾನು ಬೆಳಗ್ಗೆ ಹೋದೆ ಸಂಜೆ ಬಂದೆ. ವೈಯಕ್ತಿಕ ಕೆಲಸಕ್ಕೆ ಹೋಗಿದ್ದೆ. ಅರವಿಂದ ಬೆಲ್ಲದ ಯಾಕೆ ದೆಹಲಿಗೆ ಹೋಗಿದ್ರೋ ಗೊತ್ತಿಲ್ಲ ಎಂದರು.
ಸರ್ಕಾರ ಕಾಂಗ್ರೆಸ್, ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ:
ಇದು ಶುದ್ಧ ಬಿಜೆಪಿ ಸರ್ಕಾರ ಆಗಿ ಉಳಿದಿಲ್ಲ. ಮೂರು ಗುಂಪಿನ ಸರ್ಕಾರ ಆಗಿದೆ ಇದು. ಮೂರು ರಾಜಕೀಯ ಪಕ್ಷಗಳು ಹೊಂದಾಣಿಕೆ ಮಾಡ್ಕೊಂಡಿವೆ ಎಂದು ಆರೋಪಿಸಿದರು. ಪಕ್ಷದ ಕೆಲವು ಸ್ನೇಹಿತರು ನನ್ನ ಬಗ್ಗೆ ಮಾತಾಡ್ತಿರೋದು ಗೊತ್ತು. ಅದನ್ನ ಯಾರು ಮಾತಾಡಿಸ್ತಿರೋದು ಅಂತಲೂ ಗೊತ್ತು. ಯಾರ ಕುಮ್ಮಕ್ಕಿದೆ ಅಂತಲೂ ಗೊತ್ತು. ವಿರೋಧ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಜತೆ ಹೊಂದಾಣಿಕೆ ಮಾಡ್ಕೊಂಡಿದೆ ನಮ್ಮ ಸರ್ಕಾರ ಎಂದು ಗಂಭೀರ ಆರೋಪ ಮಾಡಿದರು.