ಮಹದೇವಪುರ(ಬೆಂಗಳೂರು):ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೋವಿಡ್-19 ನಿಯಂತ್ರಣ ಕ್ರಮಗಳನ್ನು ಪರಿಶೀಲಿಸುವ ಸಲುವಾಗಿ ಸಚಿವರಾದ ಬೈರತಿ ಬಸವರಾಜ್ ಮತ್ತು ಅರವಿಂದ ಲಿಂಬಾವಳಿ ಅವರು ಬಿಬಿಎಂಪಿ ಅಧಿಕಾರಿಗಳು, ಆರೋಗ್ಯ ಇಲಾಖೆ ಹಾಗೂ ಇನ್ನಿತರ ಇಲಾಖೆಗಳ ಉನ್ನತಾಧಿಕಾರಿಗಳ ಸಭೆ ನಡೆಸಿದ್ದಾರೆ.
ಐಟಿಪಿಎಲ್ ಮುಖ್ಯ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಣ ಮಾಡುವಲ್ಲಿ ಕಳೆದ ಒಂದು ವಾರದಿಂದ ಕೈಗೊಂಡ ಕ್ರಮಗಳ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಕೋವಿಡ್ ಸೋಂಕಿತರ ಸಲುವಾಗಿ ಒದಗಿಸುತ್ತಿರುವ ಸೌಲಭ್ಯಗಳು, ಆಸ್ಪತ್ರೆಗಳಲ್ಲಿ ಇರುವ ಐಸಿಯು, ಹೆಚ್ಡಿಯು, ವೆಂಟಿಲೇಟರ್ ಗಳ ಸಂಖ್ಯೆ, ಸದ್ಯ ಲಭ್ಯವಿರುವ ಹಾಸಿಗೆಗಳ ಅಂಕಿಅಂಶವನ್ನು ಪಡೆದುಕೊಳ್ಳಲಾಯಿತು. ಕೋವಿಡ್ ನಿಯಂತ್ರಣಕ್ಕಾಗಿ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಲಾಯಿತು.
ಮಹದೇವಪುರ ವಲಯದ 17 ವಾರ್ಡ್ ಮತ್ತು 11 ಗ್ರಾಮ ಪಂಚಾಯತ್ಗಳಿಗೆ ನೇಮಕ ಮಾಡಿದ್ದ ಅಧಿಕಾರಿಗಳ ಬಳಿ, ಕಳೆದ ಒಂದು ವಾರದಿಂದ ತಮ್ಮ ವ್ಯಾಪ್ತಿಯಲ್ಲಿ ಎಷ್ಟು ಕೇಸುಗಳು ಬಂದಿವೆ, ಹೆಚ್ಚಾಗಿದೆಯಾ, ಕಡಿಮೆ ಆಗಿದೆಯಾ, ಇದಕ್ಕೆ ಕಾರಣಗಳು ಏನು, ಯಾವ ರೀತಿ ಕ್ರಮಗಳನ್ನ ಕೈಗೊಳ್ಳಲಾಗಿದೆ ಎಂದು ವಿಚಾರಿಸಿದರು. ಪ್ರತಿಯೊಂದು ವಾರ್ಡ್ ಮತ್ತು ಪಂಚಾಯಿತಿಗಳಿಗೆ ವೈದ್ಯರನ್ನ ನೇಮಕ ಮಾಡುವಂತೆ ಸಚಿವರು ಸೂಚಿಸಿದರು.
ಸಭೆಯ ನಂತರ ಮಹದೇವಪುರದ ಕೋವಿಡ್ ವಾರ್ ರೂಂ ಗೆ ಭೇಟಿ ನೀಡಿ ಬೆಡ್ ಲಾಕ್ಗಳ ಬಗ್ಗೆ ವಿಚಾರಿಸಿದರು. ಮಹದೇವಪುರ ವಲಯದಲ್ಲಿ ವಾರ್ ರೂಂ ಗಳು ಆಸ್ಪತ್ರೆ ಬೆಡ್ ಗಳ ಮಾಹಿತಿ ಪಡೆದರು. ಈ ಬಗ್ಗೆ ಅಧಿಕಾರಿಗಳಿಗೆ ಸಚಿವ ಅರವಿಂದ ಲಿಂಬಾವಳಿ ಸಲಹೆ ಸೂಚನೆಗಳನ್ನ ನೀಡಿದರು.