ನವದೆಹಲಿ:ವಂಚನೆ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಆರೋಪಿ ಮೆಹುಲ್ ಚೋಕ್ಸಿ ಜಾಮೀನು ಅರ್ಜಿಯನ್ನು ಡೊಮಿನಿಕಾದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಿರಸ್ಕರಿಸಿದೆ.
ಭಾರತದಿಂದ ಪರಾರಿಯಾಗಿದ್ದ ಮೆಹುಲ್ ಸದ್ಯ ಕೆರಿಬಿಯನ್ ದ್ವೀಪ ರಾಷ್ಟ್ರ ಡೊಮೆನಿಕಾದಲ್ಲಿ ಪೊಲೀಸರ ವಶದಲ್ಲಿದ್ದಾರೆ. ಇನ್ನು ಈ ಹಿಂದೆ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕೆರಿಬಿಯನ್ ದ್ವೀಪ ರಾಷ್ಟ್ರಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪಕ್ಕೆ ಉತ್ತರಿಸಲು ಮೆಹುಲ್ ಚೋಕ್ಸಿಯನ್ನು ಡೊಮಿನಿಕಾದ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು.
ಆದರೆ ಈ ವೇಳೆ ನ್ಯಾಯಾಲಯವು ಜಾಮೀನು ಅರ್ಜಿಯನ್ನು ತಿರಸ್ಕರಿಸಿ, ವಿಚಾರಣೆಯನ್ನು ಉನ್ನತ ನ್ಯಾಯಾಲಯಕ್ಕೆ ವರ್ಗಾಯಿಸಿದೆ ಎಂದು ಚೋಕ್ಸಿಯ ವಕೀಲ ವಿಜಯ್ ಅಗರ್ವಾಲ್ ಹೇಳಿದ್ದಾರೆ.
ಡೊಮಿನಿಕಾ ಕೋರ್ಟ್ ನ್ಯಾಯಾಧೀಶ ಬರ್ನಿ ಸ್ಟೀಫನ್ಸನ್ ಅವರು ಉದ್ಯಮಿ ಪರವಾಗಿ ಸಲ್ಲಿಸಲಾದ ಹೇಬಿಯಸ್ ಕಾರ್ಪಸ್ ಅರ್ಜಿಯೊಂದರ ಬಗ್ಗೆ ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ನಂತರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವಂತೆ ಆದೇಶ ಹೊರಡಿಸಿದ್ದರು.
ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,500 ಕೋಟಿ ರೂ.ಗಳ ಸಾಲ ವಂಚನೆ ಎಸಗಿರುವ ಪ್ರಕರಣದಲ್ಲಿ ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಆರೋಪಿ ಮೆಹುಲ್ ಚೋಕ್ಸಿ.
ಇನ್ನು ಮೆಹುಲ್ ಪರ ವಾದಿಸಿದ್ದ ವಕೀಲರು, ಆಂಟಿಗುವಾದ ಜಾಲಿ ಹಾರ್ಬರ್‌ನಿಂದ ಮೆಹುಲ್ನನ್ನು ಅಪಹರಿಸಿ ಸುಮಾರು 100 ನಾಟಿಕಲ್ ಮೈಲುಗಳಷ್ಟು ದೂರದಲ್ಲಿರುವ ದೋಣಿಯಲ್ಲಿ ಡೊಮಿನಿಕಾಗೆ ಕರೆತರಲಾಗಿದೆ ಎಂದು ಆರೋಪಿಸಿದ್ದರು.
"ಮೆಹುಲ್ ಚೋಕ್ಸಿ ಅವರನ್ನು ನ್ಯಾಯಾಧೀಶರ ಮುಂದೆ 72 ಗಂಟೆಗಳ ಒಳಗೆ ಹಾಜರುಪಡಿಸಬೇಕಾಗಿತ್ತು. ಈ ವಿಷಯವು ಹೇಬಿಯಸ್ ಕಾರ್ಪಸ್ ಅರ್ಜಿಯದ್ದಾಗಿದೆ. ಆದರೆ ಅವರು ಭಾರತಕ್ಕೆ ವಾಪಸಾಗುವುದರ ಬಗ್ಗೆ ಅಲ್ಲ. ಅವರ ಪೌರತ್ವವನ್ನು ನ್ಯಾಯಾಲಯದ ಮುಂದೆ ಪ್ರಶ್ನಿಸಲಾಗಿಲ್ಲ. ಭಾರತ ಸರ್ಕಾರದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ" ಎಂದು ಚೋಕ್ಸಿ ಪರ ವಕೀಲ ವಿಜಯ್ ಅಗರ್ವಾಲ್ ಹೇಳಿದ್ದಾರೆ.