ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾಸ್ನೇಹಿ ತೆರಿಗೆ ಸುಧಾರಣೆಗೆ ಮುಂದಾಗಿದ್ದು, ಈ ಬಗ್ಗೆ ಶೀಘ್ರ ಅಂತಿಮ ತೀರ್ಮಾನ ಕೈಗೊಳ್ಳುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್, ನಗರಾಭಿವೃದ್ದಿ ಸಚಿವ ಬಿ.ಎ.ಬಸವರಾಜ್ ಹಾಗೂ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರ ಅಧ್ಯಕ್ಷತೆಯಲ್ಲಿ ಎಲ್ಲಾ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ರಾಜ್ಯದ ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಅವರು ಸಭೆ ನಡೆಸಿದರು. ಈ ಸಭೆಯಲ್ಲಿ ಎಲ್ಲಾ ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಸಮಸ್ಯೆಗಳನ್ನು ತಿಳಿಸಿದರು.
ನಂತರ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಕೈಗಾರಿಕೆಗಳ ಮೇಲೆ ಹಾಕಲಾಗುತ್ತಿರುವ ತೆರಿಗೆಗಳು ಬಹಳ ಹೆಚ್ಚಾಗಿವೆ. ಖಾಲಿ ಇರುವ ಜಾಗದ ಮೇಲೂ ಬಹಳಷ್ಟು ತೆರಿಗೆ ಹಾಕಲಾಗುತ್ತಿದೆ. ಅಲ್ಲದೆ, ತೆರಿಗೆ ಪದ್ದತಿಯಲ್ಲಿ ರಾಜ್ಯಾದ್ಯಂತ ಪಾರದರ್ಶಕ ಹಾಗೂ ಒಂದೇ ರೀತಿಯ ತೆರಿಗೆ ಪದ್ದತಿ ಅಳಡಿಸಿಕೊಳ್ಳುವುದು ಬಹಳ ಅವಶ್ಯಕ ಎಂದರು.
ಈ ಹಿನ್ನೆಲೆಯಲ್ಲಿ ಇಂದು ಮೂರು ಸಚಿವರ ಉಪಸ್ಥಿತಿಯಲ್ಲಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಎಲ್ಲಾ ಸಮಸ್ಯೆಗಳ ಬಗ್ಗೆಯೂ ಶೀಘ್ರವಾಗಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ರಾಜ್ಯದಲ್ಲಿ ಕೈಗಾರಿಕಾ ಸ್ನೇಹಿ ತೆರಿಗೆ ಪದ್ದತಿಯ ಅನುಷ್ಠಾನಕ್ಕೆ ಅಗತ್ಯವಿರುವ ಸುಧಾರಣೆಗಳನ್ನು ಶೀಘ್ರ ಕೈಗೊಳ್ಳಬೇಕು.