ಬೆಂಗಳೂರು :ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ರಾಜಕೀಯ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ. ವಿಜೇತ ಅಭ್ಯರ್ಥಿಗಳು ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ಗೆಲುವಿನ ನಗೆ ಬೀರಿರುವುದು ಇನ್ನೊಂದು ವಿಶೇಷ.
ರಾಜ್ಯದ 28 ಕ್ಷೇತ್ರಗಳಲ್ಲಿ ಅತ್ಯಧಿಕ ಬಹುಮತ ಪಡೆದು ವಿಜೇತವಾಗಿರುವ ಉತ್ತರ ಕನ್ನಡ ಕ್ಷೇತ್ರದ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಅವರು ಬರೋಬ್ಬರಿ 4,86,042 ಮತಗಳ ಅಂತರದಿಂದ ಜಯ ಪಡೆದಿದ್ದಾರೆ. ಇದರ ಬೆನ್ನಲ್ಲೆ ಮೂವರು ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರ ಪಡೆದು ಜಯದ ನಗೆ ಬೀರಿದ್ದಾರೆ. ಬೆಳಗಾವಿ ಕ್ಷೇತ್ರದ ಸುರೇಶ ಅಂಗಡಿ 3.87 ಲಕ್ಷ ಮತಗಳು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಶೋಭಾ ಕರಂದ್ಲಾಜೆ, ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿಸೂರ್ಯ 3.31 ಲಕ್ಷ ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.
ದಕ್ಷಿಣಕನ್ನಡ ಕ್ಷೇತ್ರದ ನಳೀನ್ ಕಟೀಲ್ ಅವರು 2.74 ಲಕ್ಷ ಮತಗಳ ಅಂತರ, ವಿಜಯಪುರದ ರಮೇಶ ಜಿಗಜಿಣಗಿ 2.58 ಲಕ್ಷ ಮತಗಳ ಅಂತರ, ಶಿವಮೊಗ್ಗದ ಬಿ.ವೈ.ರಾಘವೇಂದ್ರ ಅವರು 2.23 ಲಕ್ಷ ಮತಗಳ ಅಂತರ, ಕೋಲಾರದ ಎಸ್.ಮುನಿಸ್ವಾಮಿ 2.10 ಲಕ್ಷ ಮತಗಳ ಅಂತರ, ಬೆಂಗಳೂರು ಗ್ರಾಮಾಂತರದಿಂದ ಡಿ.ಕೆ.ಸುರೇಶ 2.06 ಲಕ್ಷ ಮತಗಳ ಅಂತರ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದ ಪ್ರಹ್ಲಾದ್ ಜೋಶಿ ಅವರು 2.05 ಲಕ್ಷ ಮತಗಳ ಅಂತರದಲ್ಲಿ ಜಯಿಸಿ ನಗೆ ಬೀರಿದ್ದಾರೆ.
ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಬಿ.ಎನ್.ಬಚ್ಚೇಗೌಡ, ದಾವಣಗೆರೆಯಿಂದ ಜಿ.ಎಂ.ಸಿದ್ದೇಶ್ವರ, ಬಾಗಲಕೋಟೆಯಿಂದ ಪಿ.ಸಿ.ಗದ್ದಿಗೌಡರ್, ಬೆಂಗಳೂರು ಉತ್ತರ ಡಿ.ವಿ.ಸದಾನಂದಗೌಡ, ಹಾಸನದಿಂದ ಪ್ರಜ್ವಲ್ ರೇವಣ್ಣ, ಹಾವೇರಿಯಿಂದ ಶಿವಕುಮಾರ ಉದಾಸಿ, ಮೈಸೂರು-ಕೊಡಗು ಪ್ರತಾಪ್ ಸಿಂಹ, ಮಂಡ್ಯ ಕ್ಷೇತ್ರದಿಂದ ಸುಮಲತಾ ಎ., ಚಿಕ್ಕೋಡಿಯ ಅಣ್ಣಾಸಾಹೇಬ ಜೊಲ್ಲೆ, ರಾಯಚೂರಿನ ರಾಜಾ ಅಮರೇಶ್ವರ ನಾಯಕ, ಬೀದರ್ನ ಭಗವಂತ ಖೂಬಾ ಸೇರಿ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಭೇರಿ ಭಾರಿಸಿದ್ದಾರೆ.ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಅತಿ ಕಡಿಮೆ ಮತಗಳ ಅಂತರದ ಗೆಲುವು ಕಂಡಿದ್ದಾರೆ.