ಹಾಸನ:ಜಿಲ್ಲೆಯಪಡುವಲಹಿಪ್ಪೆ ಮತಗಟ್ಟೆಯಲ್ಲಿ ಅಕ್ರಮ ಮತದಾನವಾಗಿರುವುದು ಸಾಬೀತಾಗಿದೆ. ಕೇವಲ ಮತಗಟ್ಟೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡರೆ ಸಾಲದು. ಮತಗಟ್ಟೆ ಒಳಗೆ ಅರ್ಧಗಂಟೆಗೂ ಹೆಚ್ಚು ಕಾಲ ನಿಂತು ಅಕ್ರಮ ಮತ ಹಾಕಿಸಿಕೊಂಡವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಪ್ರೀತಂ ಜೆ ಗೌಡ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಆಕಸ್ಮಿಕ ಶಾಸಕ ಎಂದು ಜರಿದಿದ್ದವರು ಕಳ್ಳ ಓಟು ಹಾಕಿಸಿಕೊಂಡು ಗೆದ್ದವರು ಎಂದು ಸಚಿವ ರೇವಣ್ಣ ಕುಟುಂಬದ ವಿರುದ್ಧ ಗಂಭೀರ ಆರೋಪ ಮಾಡಿದರು.
ಅಕ್ರಮ ಮತದಾನ ಮಾಡಿಸಿದವರ ವಿರುದ್ಧ ಶಾಸಕ ಪ್ರೀತಂ ಗೌಡ ಆಗ್ರಹ ಹೊಳೆನರಸೀಪುರ ತಾಲೂಕಿನ 19 ಬೂತ್‍ಗಳಲ್ಲಿ ಇದೇ ರೀತಿ ಅಕ್ರಮವಾಗಿ ಮತದಾನ ಮಾಡಲಾಗಿದೆ. ಈ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದ ಪ್ರೀತಂ ಗೌಡ ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸದೆ ಬಿಡುವುದಿಲ್ಲ ಎಂದು ಸವಾಲು ಹಾಕಿದ್ದಾರೆ.
ಈ ಚುನಾವಣೆಯಲ್ಲಿ ಜೆಡಿಎಸ್‍ನವರನ್ನು ಬೆತ್ತಲು ಮಾಡಿದ್ದೇವೆ. ಚುನಾವಣಾ ಆಯೋಗವನ್ನು ನಾನು ಮೊದಲು ಅಭಿನಂದಿಸುತ್ತೇನೆ. ಮಾಜಿ ಪ್ರಧಾನಿ ದೇವೇಗೌಡರು ಎಂದೂ ಸಹ ಈ ರೀತಿಯ ರಾಜಕಾರಣ ಮಾಡಿರಲಿಲ್ಲ. ಅವರು ಸಭ್ಯ ಹಾಗೂ ಪ್ರಬುದ್ಧ ರಾಜಕಾರಣ ಮಾಡಿಕೊಂಡು ಬಂದಿದ್ದವರು. ಆದರೆ, ಇಂದು ಅವರ ಮನೆಯಿಂದಲೇ ಅವರ ವ್ಯಕ್ತಿತ್ವಕ್ಕೆ ಚ್ಯುತಿ ಬರುವ ರೀತಿಯಲ್ಲಿ ರಾಜಕಾರಣ ಮಾಡುತ್ತಿದ್ದಾರೆಂದು ಸಚಿವ ರೇವಣ್ಣ ವಿರುದ್ಧ ಬಿಜೆಪಿ ಶಾಸಕ ಹರಿಹಾಯ್ದರು.