ಚಿಕ್ಕೋಡಿ :ಹೆರಿಗೆ ನೋವಿನಿಂದ ನರಳುತ್ತಾ ಬಂದ ಗರ್ಭಿಣಿಯನ್ನು ದಾಖಲಿಸಿಕೊಳ್ಳದೆ ಕೊರೊನಾ ನೆಪವೊಡ್ಡಿ ರಾಯಬಾಗದ ಆಸ್ಪತ್ರೆ ವೈದ್ಯರು ಅಮಾನವೀಯತೆ ತೋರಿದ್ದರು. ಇದನ್ನು ಖಂಡಿಸಿ ಗ್ರಾಮಸ್ಥರು ಸೂಕ್ತ ಕ್ರಮಕ್ಕೆ ಮನವಿ ಮಾಡಿದ್ದಾರೆ.
ಹೆರಿಗೆ ನೋವಿನೊಂದ ಗರ್ಭಿಣಿಯೋರ್ವರು ರಾಯಬಾಗ ತಾಲೂಕು ಆಸ್ಪತ್ರೆಗೆ ದಾಖಲಾಗಲು ಬಂದಿದ್ದರು. ಆದರೆ ವೈದ್ಯರು ಕೊರೊನಾ ನೆಪವೊಡ್ಡಿ ಮಹಿಳೆಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ಇದನ್ನು ಖಂಡಿಸಿ ಕುಡಚಿ ಗ್ರಾಮಸ್ಥರು ಮುಖ್ಯ ವೈದ್ಯಾಧಿಕಾರಿ ಡಾ.ಆರ್.ಎಚ್.ರಂಗಣ್ಣ ಅವರಿಗೆ ಮನವಿ ಸಲ್ಲಿಸಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಕುಡಚಿ ಪಟ್ಟಣದಲ್ಲಿ ಕೊರೊನಾ ಪ್ರಕರಣ ಕಂಡು ಬಂದಿದ್ದು, ಅಲ್ಲಿನ ಯಾವುದೇ ರೋಗಿಯನ್ನು ನೆರೆ ಮಹಾರಾಷ್ಟ್ರದ ಮಿರಜ, ಸಾಂಗ್ಲಿ ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಳ್ಳುತ್ತಿಲ್ಲ. ಇದರಿಂದ ಕುಡಚಿ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ. ರಾಯಬಾಗ ತಾಲೂಕಾಸ್ಪತ್ರೆಯಲ್ಲಿ ಸಿಜರಿನ್ ಹೆರಿಗೆ, ಡಯಾಲಿಸಿಸ್, ಅಪೆಂಡಿಕ್ಸ್, ಸೋನೋಗ್ರಾಫಿ, ಎಲುಬು ಕೀಲುಗಳ ಚಿಕಿತ್ಸೆಗೆ ಅನುಕೂಲವಿದ್ದರೂ ಚಿಕಿತ್ಸೆ ನೀಡುವುದಿಲ್ಲ.