ಬಾಗಲಕೋಟೆ: ರಾಜ್ಯದ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಭೀಕರ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ಕಳೆದ ವಾರ ಮಹಾರಾಷ್ಟ್ರ ಸಿಎಂ ಜೊತೆ ನೇರವಾಗಿ ಮಾತುಕತೆ ನಡೆಸಿದ್ದೆವು. ಅದರಂತೆ ನೀರು ಬಿಡುಗಡೆಗೊಳಿಸುವುದಾಗಿಯೂ ಸಿಎಂ ದೇವೇಂದ್ರ ಫಡ್ನವೀಸ್ ತಿಳಿಸಿದ್ದರು.
ಆದರೆ, ರಾಜ್ಯ ಸರ್ಕಾರ ಇಂದಿಗೂ ಎಂಓಯು(ನೀರು ಬಿಡುಗಡೆ ಒಪ್ಪಂದ) ಮಾಡಿಕೊಡದ ಕಾರಣ ತೀವ್ರ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ ಎಂದು ಬಾಗಲಕೋಟೆ ಬಿಜೆಪಿ ಜಿಲ್ಲಾಧ್ಯಕ್ಷ, ಶಾಸಕ ಸಿದ್ದು ಸವದಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಮಹಾರಾಷ್ಟ್ರ ಸರ್ಕಾರದೊಂದಿಗೆ ಒಪ್ಪಂದದ ಪ್ರಕಾರ ಕೃಷ್ಣಾ ನದಿಯಿಂದ ರಾಜ್ಯಕ್ಕೆ 4 ಟಿಎಂಸಿಯಷ್ಟು ನೀರನ್ನು ಬೇಸಿಗೆ ಸಂದರ್ಭದಲ್ಲಿ ನೀಡಬೇಕು. ಇದಕ್ಕನುಗುಣವಾಗಿ ಮಹಾರಾಷ್ಟ್ರಕ್ಕೆ ಭೀಮಾ ನದಿಯಿಂದ ಮಳೆಗಾಲ ಸಂದರ್ಭ 2 ಟಿಎಂಸಿ ಹಾಗೂ ಬೇಸಿಗೆ ಸಂದರ್ಭ 2 ಟಿಎಂಸಿಯಷ್ಟು ನೀರನ್ನು ಬಿಡುಗಡೆಯ ಒಪ್ಪಂದವನ್ನು ಅಧಿಕೃತಗೊಳಿಸದ ಕಾರಣ ಮೂರು ಜಿಲ್ಲೆಗಳ ಜನ-ಜಾನುವಾರುಗಳು ಜಲಕ್ಷಾಮ ಎದುರಿಸುವಂತಾಗಿದೆ ಎಂದು ಹೇಳಿದರು.
ಭಾನುವಾರ ಸಂಜೆ ಬನಹಟ್ಟಿಯ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆಯನ್ನು ಪರಿಶೀಲಿಸಿ ಮಾತನಾಡಿದ ಅವರು, ನೀರು ಬರುವುದರೊಳಗಾಗಿ ಇಡೀ ಘಟಕವನ್ನು ಶುಚಿಗೊಳಿಸುವ ಮೂಲಕ ಜನತೆಗೆ ಮತ್ತೆ ಶುದ್ಧ ನೀರನ್ನು ನೀಡುವಲ್ಲಿ ನಗರಸಭೆ ಸನ್ನದ್ಧವಾಗುತ್ತಿದೆ. ರಬಕವಿ-ಬನಹಟ್ಟಿ ನಗರ ಸಭೆ ವ್ಯಾಪ್ತಿಯ ಜನತೆಗೆ ಬೇಸಿಗೆ ಸಂದರ್ಭ ನೀರು ಪೂರೈಕೆಯಲ್ಲಿ ಸಕಲ ರೀತಿಯಲ್ಲಿ ಸನ್ನದ್ಧವಾಗಿದ್ದು ಹೆಮ್ಮೆ ವಿಷಯ. ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಕೆಲ ವಾರ್ಡ್ಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರಿಲ್ಲ, ಅಂತಹ ಪ್ರದೇಶಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದು ಎಂದು ಹೇಳಿದರು.
ನೀರಿನ ಸಮಸ್ಯೆ ಎದುರಾದ್ದಲ್ಲಿ ತಕ್ಷಣವೇ ನಗರಸಭೆ ಅಥವಾ ಶಾಸಕರ ಕಚೇರಿಯನ್ನು ಸಂಪರ್ಕಿಸಿದರೆ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ನಗರಸಭೆಯ ಸಹಾಯವಾಣಿ ಸಂಖ್ಯೆ 08353-231262 ನಂಬರನ್ನು ಸಂಪರ್ಕಿಸಬಹುದೆಂದು ಸವದಿ ತಿಳಿಸಿದರು.
ನಗರಸಭೆ ಪೌರಾಯುಕ್ತ ಆರ್.ಎಂ. ಕೊಡಗೆ ಮಾತನಾಡಿ, ಈಗಾಗಲೇ ಅವಳಿ ಪಟ್ಟಣದಲ್ಲಿ ನೀರು ಪೂರೈಕೆಗೆ ಸಕಲ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಕೆಲ ಗುಡ್ಡದ ಪ್ರದೇಶದಲ್ಲಿ ಟ್ಯಾಂಕರ್ ಮೂಲಕ ಈಗಾಗಲೇ ನೀರು ಒದಗಿಸುತ್ತಿದ್ದು, ಇನ್ನೆರಡು ದಿನಗಳಲ್ಲಿ ಮತ್ತಷ್ಟು ಟ್ಯಾಂಕರ್ ವ್ಯವಸ್ಥೆ ಕಲ್ಪಿಸುವ ಮೂಲಕ ಜನತೆಗೆ ನೀರು ಒದಗಿಸುವುದಾಗಿ ತಿಳಿಸಿದರು. ಇದೇ ಸಂದರ್ಭ ಸಹಾಯಕ ಅಭಿಯಂತರ ಪರಕಾಳೆ, ನಗರಸಭಾ ಸದಸ್ಯೆ ಸರೋಜಿನಿ ಸಾರವಾಡ, ಮಹಾದೇವ ಚನಾಳ, ಪರಸಪ್ಪ ಜಿಡ್ಡಿಮನಿ ಸೇರಿದಂತೆ ಅನೇಕರಿದ್ದರು.