ಕೊರೊನಾ ಭೀತಿ: ಎಪಿಪಿ ನೇಮಕಾತಿ ಪರೀಕ್ಷೆ ಮುಂದೂಡಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ - Karnataka Testing Authority
ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಜೂನ್ .21 ರಂದು ನಡೆಸಬೇಕಿದ್ದ ಅಸಿಸ್ಟಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ (ಎಪಿಪಿ) ಪ್ರಾಥಮಿಕ ನೇಮಕಾತಿ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದೂಡಿದೆ.
ಬೆಂಗಳೂರು:ರಾಜ್ಯದಲ್ಲಿ ಕೊರೊನಾ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಜೂನ್ .21 ರಂದು ನಡೆಸಬೇಕಿದ್ದ ಅಸಿಸ್ಟಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ (ಎಪಿಪಿ) ಪ್ರಾಥಮಿಕ ನೇಮಕಾತಿ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದೂಡಿದೆ.
ಈ ಕುರಿತಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ), ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆ ಹೊರಡಿಸಿದ್ದಾರೆ. ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜೂನ್. 21ಕ್ಕೆ ನಿಗದಿಯಾಗಿದ್ದ ಅಸಿಸ್ಟಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಪರೀಕ್ಷೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಮುಂದಿನ ಪರೀಕ್ಷಾ ದಿನಾಂಕವನ್ನು ಪ್ರಾಧಿಕಾರದ ವೆಬ್ ಸೈಟ್ http://kea.kar.nic.in ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.
ರಾಜ್ಯ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ಅಭಿಪ್ರಾಯದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಪಿಪಿ ನೇಮಕ ಪರೀಕ್ಷೆಗಳನ್ನು ಜೂನ್ .21 ರಂದು ನಡೆಸಲು ಉದ್ದೇಶಿಸಿತ್ತು. ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿ ಪರೀಕ್ಷಾ ಕೇಂದ್ರಗಳಲ್ಲಿ ಸಿದ್ಧತೆಯೂ ನಡೆದಿತ್ತು. ಆದರೆ ರಾಜ್ಯದಲ್ಲಿ ಕೊರೊನಾ ಮಹಾಮಾರಿ ವ್ಯಾಪಿಸಲು ಆರಂಭಿಸಿದ ಬಳಿಕ ಪರೀಕ್ಷೆಯನ್ನು ಮುಂದೂಡಬೇಕು ಎಂದು ರಾಜ್ಯ ವಕೀಲರ ಪರಿಷತ್ ಸದಸ್ಯ ಎಸ್. ಬಸವರಾಜ್ ಮತ್ತು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಆಗ್ರಹಿಸಿದ್ದರು.
ಈ ಹಿನ್ನೆಲೆಯಲ್ಲಿ ಕೆಇಎ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿ ಕಾಲ ಮುಂದೂಡಿದೆ. ಮೊದಲಿಗೆ ಪರೀಕ್ಷೆಯನ್ನು ಮಾರ್ಚ್ 28ಕ್ಕೆ ನಿಗದಿ ಮಾಡಲಾಗಿತ್ತು. ಲಾಕ್ ಡೌನ್ ಕಾರಣಕ್ಕಾಗಿ ಪರೀಕ್ಷೆಯನ್ನು ಜೂನ್ .21ಕ್ಕೆ ಮುಂದೂಡಿತ್ತು. ಇದೀಗ ಪರಿಸ್ಥಿತಿ ಹಿಡಿತದಲ್ಲಿ ಇಲ್ಲದಿರುವ ಹಿನ್ನೆಲೆಯಲ್ಲಿ ಯಾವುದೇ ದಿನಾಂಕ ನಿಗದಿ ಮಾಡಿದ ಪರೀಕ್ಷೆಗಳನ್ನು ಮುಂದೂಡಲಾಗಿದೆ.