ಬೆಂಗಳೂರು: 'ಕರ್ನಾಟಕದ ಸಿಂಗಂ' ಖ್ಯಾತಿಯ ಅಣ್ಣಾಮಲೈ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ವಯಕ್ತಿಕ ಜೀವನಕ್ಕೆ ಸಮಯ ಕೊಡುವ ಕಾರಣದಿಂದ ರಾಜೀನಾಮೆ ನೀಡಿರುವುದಾಗಿ ಈಗಾಗಲೇ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದು, ಈ ಮಧ್ಯೆ ಅಣ್ಣಾಮಲೈ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.
ಅಣ್ಣಾಮಲೈ ಪತ್ರ ಸಾರಾಂಶ:
ನಿಮ್ಮೆಲ್ಲರಿಗೂ ಶುಭಾಶಯಗಳು. ನಾನು ರಾಜೀನಾಮೆ ನೀಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಪ್ರಕಟಗೊಳ್ಳುತ್ತಿರುವ ಸುದ್ದಿಗಳ ಹಿನ್ನೆಲೆಯಲ್ಲಿ ನಾನು ಈ ಪತ್ರ ಬರೆಯುತ್ತಿರುವೆ. ಮೇ 28ರ 2019ರಂದು ನಾನು ಪೊಲೀಸ್ ಸೇವೆಗೆ ರಾಜೀನಾಮೆ ಸಲ್ಲಿಕೆ ಮಾಡಿರುವೆ. ಈ ಪ್ರಕ್ರಿಯೆ ಮುಕ್ತಾಯಗೊಳ್ಳಲು ಇನ್ನು ಕೆಲದಿನಗಳ ಕಾಲಾವಕಾಶ ಬೇಕು. ಇದರ ಮಧ್ಯೆ ಹರಡಿರುವ ಕೆಲವು ಊಹಾಪೋಹಗಳಿಗೆ ನಾನು ನೇರವಾಗಿ ಉತ್ತರ ನೀಡಿರುವೆ.
ನಾನು ಸೇವೆ ಸಲ್ಲಿಸುತ್ತಿದ್ದ ಪೊಲೀಸ್ ಇಲಾಖೆಗೆ ದಿಢೀರ್ ಆಗಿ ರಾಜೀನಾಮೆ ನೀಡಿಲ್ಲ.ಕಳೆದ ಆರು ತಿಂಗಳಿಂದ ಯೋಚನೆ ಮಾಡಿ ಈ ನಿರ್ಧಾರ ಕೈಗೊಂಡಿರುವೆ. ಕಳೆದ 9 ವರ್ಷಗಳಿಂದ ಖಾಕಿ ಬಟ್ಟೆ ಹಾಕಿಕೊಂಡು ಸೇವೆ ಸಲ್ಲಿಸಿರುವೆ. ಖಾಕಿ ಸೇವೆಯ ಪ್ರತಿಕ್ಷಣವನ್ನೂ ಆನಂದಿಸಿರುವೆ. ಖಾಕಿ ಜತೆ ಬದುಕಿರುವೆ. ಈ ಅವಧಿಯಲ್ಲಿ ನಾನು ಅನೇಕ ವಯಕ್ತಿಕ ಸಭೆ, ಸಮಾರಂಭ, ಕೆಲವೊಮ್ಮೆ ಕುಟುಂಬದ ಸಮಾರಂಭಗಳಲ್ಲೂ ಭಾಗಿಯಾಗಲು ಆಗಿಲ್ಲ. ತುಂಬಾ ಹತ್ತಿರದವರು ನಿಧನವಾದಾಗ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲೂ ಆಗಲಿಲ್ಲ. ಅದಕ್ಕೆ ನನಗೆ ಈಗಲೂ ಬೇಸರವಿದೆ. ಪೊಲೀಸ್ ಕೆಲಸ ದೇವರಿಗೆ ಸಮವಾದದ್ದು. ಕೆಲವೊಮ್ಮೆ ತೀವ್ರ ಒತ್ತಡಕ್ಕೂ ಒಳಗಾಗಿದ್ದು,ಅವುಗಳನ್ನ ಸರಿಯಾಗಿ ನಿಭಾಯಿಸಿರುವೆ. ಕಷ್ಟದಲ್ಲಿದ್ದಾಗ ಅನೇಕರು ಸಹಾಯ ಮಾಡಿದ್ದಾರೆ.