ಕರ್ನಾಟಕ

karnataka

ETV Bharat / briefs

ಮೋದಿ ವಿಶ್ವ ಮಾದರಿಯಾಗುವ ಉದ್ದೇಶದಿಂದ ಲಸಿಕೆಗಳನ್ನು ವಿದೇಶಕ್ಕೆ ನೀಡಿದ್ದಾರೆ: ಜೆ.ಆರ್.ಲೋಬೊ - mangaluru Tika campaign

ದೇಶದ ಜನತೆಗೆ ಲಸಿಕೆ ವಿತರಣೆ ಮಾಡುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಿಜೆಪಿಗರು ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಕಾಂಗ್ರೆಸ್​ನವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಲೇವಡಿ ಮಾಡಿದರು.

ಜೆ.ಆರ್.ಲೋಬೊ ಲೇವಡಿ
ಜೆ.ಆರ್.ಲೋಬೊ ಲೇವಡಿ

By

Published : Jun 3, 2021, 7:47 AM IST

ಮಂಗಳೂರು: ಪ್ರಧಾನಿ ಮೋದಿಯವರು ಇಡೀ ವಿಶ್ವಕ್ಕೆ ಮಾದರಿ ಎಂದು ತೋರಿಸುವ ಸಲುವಾಗಿ ಲಸಿಕೆಯನ್ನು ಬೇರೆ ದೇಶಗಳಿಗೆ ನೀಡಿರೋದು ನಮ್ಮ ಅನ್ನದ ಬಟ್ಟಲಿನಿಂದ ಬೇರೆಯವರಿಗೆ ನೀಡಿದಂತಾಗಿದೆ. ಇದು ಮನೆಯ ಶಿಶು ಅನ್ನ ಇಲ್ಲದೆ ಸಾಯುತ್ತಿರುವಾಗ ಬೇರೆಯವರಿಗೆ ಬಿರಿಯಾನಿ ಭೋಜನ ಕೊಟ್ಟಂತಾಗಿದೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಲೇವಡಿ ಮಾಡಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಸರಿಯಾದ ಮುಂದಾಲೋಚನೆ ಇಲ್ಲದ ಕಾರಣ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಸರಿಯಾಗಿ ಲಸಿಕೆಯ ಉತ್ಪಾದನೆ ಆಗದಿದ್ದಲ್ಲಿ ಆಮದು ಆದರೂ ಮಾಡಬೇಕಿತ್ತು ಎಂದು ಹೇಳಿದರು.

ದೇಶದ ಜನತೆಗೆ ಲಸಿಕೆ ವಿತರಣೆ ಮಾಡುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರ ಜೀವನ್ಮರಣದ ಪ್ರಶ್ನೆಯಾಗಿರುವ ಕಾರಣ ದೇಶದ ಎಲ್ಲಾ ಜನರಿಗೆ ಉಚಿತವಾಗಿ ಲಸಿಕೆ ವ್ಯವಸ್ಥೆ ಆಗಬೇಕು. ಆದರೆ ಇದರ ಬದಲಿಗೆ ಕೇಂದ್ರಕ್ಕೆ ಒಂದು ದರ, ರಾಜ್ಯಕ್ಕೊಂದು ದರ, ಖಾಸಗಿಯಲ್ಲಿ ಒಂದು ದರ, ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಸಿಗೋದಿಲ್ಲ. ಇಂತಹ ಅವ್ಯವಹಾರ, ಅವ್ಯವಸ್ಥೆ, ಬೇಜವಾಬ್ದಾರಿತನ ಬೇರೆ ಯಾವುದೇ ಸರ್ಕಾರದಲ್ಲಿ ಕಾಣಲು ಸಾಧ್ಯವಿಲ್ಲ ಎಂದರು.

ಬಿಜೆಪಿಗರು ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಕಾಂಗ್ರೆಸ್​ನವರು ಲಸಿಕೆ ಹಾಕುವುದು ಬೇಡ ಎಂದು ಪ್ರಚಾರ ಮಾಡುತ್ತಿದ್ದಾರೆ ಅಂತ ಹೇಳುತ್ತಿದ್ದಾರೆ. ಇವರಿಗೆ ಲಸಿಕೆ ಕೊಡುವ ತಾಕತ್ತಿಲ್ಲ. ಲಸಿಕೆ ಉತ್ಪಾದನೆ ಮಾಡುವ ಕಂಪನಿಗಳಿಗೆ ಪ್ರೋತ್ಸಾಹ ಮಾಡುತ್ತಿಲ್ಲ. ಅಲ್ಪಸ್ವಲ್ಪ ಇದ್ದ ಲಸಿಕೆಗಳನ್ನು ರಫ್ತು ಮಾಡಿದ್ದಾರೆ. ಸರಿಯಾದ ಯೋಜನೆ ಇಲ್ಲದ ಕಾರಣ ಈ ರೀತಿ ಆಗುತ್ತಿದೆ ಎಂದು ಹೇಳಿದರು.

ಮಂಗಳೂರು ನಗರ ಪಾಲಿಕೆಯಲ್ಲಿ ತ್ಯಾಜ್ಯ ವಿಲೇವಾರಿಯಲ್ಲಿ ಹೊಸ ನಿಯಮ ಬಂದ ಬಳಿಕ ಸರಿಯಾಗಿ ತ್ಯಾಜ್ಯ ವಿಲೇವಾರಿಯಾಗದೆ ಎಲ್ಲೆಡೆ ಕಸದ ರಾಶಿ ಕಂಡು ಬರುತ್ತಿದೆ. ಪಾಲಿಕೆಯು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತ್ಯಾಜ್ಯ ವಿಲೇವಾರಿಯ ಹೊಸ ನಿಯಮ ಜಾರಿಗೆ ತರಬೇಕಿತ್ತು. ಅದನ್ನು ಮಾಡಿಲ್ಲ. ಮನಪಾದಲ್ಲಿ ಸರಿಯಾದ ಆದಾಯದ ವ್ಯವಸ್ಥೆ ಮಾಡಿದರೆ ಕಸ ವಿಲೇವಾರಿಗೆ ಸಂಪನ್ಮೂಲದ ಕೊರತೆ ಖಂಡಿತಾ ಆಗೋದಿಲ್ಲ. ಮನಪಾದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ತ್ಯಾಜ್ಯ ವಿಲೇವಾರಿ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಜೆ.ಆರ್.ಲೋಬೊ ಹೇಳಿದರು.

ABOUT THE AUTHOR

...view details