ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಜನತಾ ಬಜಾರ್ ಆಯ್ಕೆಯಾಗಿದ್ದು, ಮಾರುಕಟ್ಟೆ ಸ್ಥಳಾಂತರ ಮಾಡುವಂತೆ ಪಾಲಿಕೆ ಗಡುವು ನೀಡಿದೇ ಕಾಮಗಾರಿ ಆರಂಭಿಸಿರುವುದನ್ನು ಖಂಡಿಸಿ ಜನತಾ ಬಜಾರ್ನ ವಿವಿಧ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದರು.
ಜನತಾ ಬಜಾರ್ ಮಾರುಕಟ್ಟೆ ಸ್ಥಳಾಂತರಕ್ಕೆ ಗಡವು ನೀಡದ ಪಾಲಿಕೆ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಮಹಾನಗರ ಪಾಲಿಕೆಯು ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಕಾಮಗಾರಿಗೆ ಚಾಲನೆ ನೀಡಿದೆ. ಆದರೆ ಇದರಿಂದ ವ್ಯಾಪಾರಿಗಳಿಗೆ ತೊಂದರೆ ಉಂಟಾಗುತ್ತದೆ. ಅಧಿಕಾರಿಗಳು ನೂತನ ಕಾಮಗಾರಿ ಪೂರ್ಣಗೊಳ್ಳುವವರೆಗೂ ವ್ಯಾಪಾರ ವಹಿವಾಟಿಗೆ, ಚಿಕ್ಕ ವ್ಯಾಪಾರಸ್ತರಿಗೆ ಪರ್ಯಾಯ ಸ್ಥಳ ನೀಡಬೇಕು. ಬಳಿಕವೇ ನಾವೂ ಈ ಮಾರುಕಟ್ಟೆ ಬಿಟ್ಟು ಹೋಗುತ್ತೇವೆ ಎಂದು ಪ್ರತಿಭಟನಾಕಾರರು ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ಹೊರ ಹಾಕಿದರು.
ನಾವು ಹಲವಾರು ವರ್ಷಗಳಿಂದ ಇದೇ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಿದ್ದೇವೆ. ಒಮ್ಮಿಂದೊಮ್ಮೆಲೆ ಈಗ ಕಾಮಗಾರಿ ಹೆಸರಿನಲ್ಲಿ ನಮ್ಮ ವ್ಯಾಪಾರ, ವಹಿವಾಟಿಗೆ ಅಡ್ಡಿ ಪಡಿಸಲಾಗುತ್ತಿದೆ. ಇದರಿಂದ ನಮ್ಮ ಜೀವನ ನಿರ್ವಹಣೆ ಕಷ್ಟವಾಗುತ್ತದೆ ಎಂದು ಪ್ರತಿಭಟನಾಕಾರರು ತಮ್ಮ ಅಳಲು ತೋಡಿಕೊಂಡರು.
ಪ್ರತಿಭಟನೆಯ ಬಳಿಕ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಅಧ್ಯಕ್ಷ ಮುಜಾಹಿದ್, ಪ್ರೇಮನಾಥ ಚಿಕ್ಕತುಂಬಳ, ಉಪಾಧ್ಯಕ್ಷರಾದ ನಾರಾಯಣ ಮುದ್ದಣ್ಣವರ, ರಾಜು ವಾಲ್ಮೀಕಿ, ರಾಘವೇಂದ್ರ ತಾಂಬ್ರೆ, ಹೀರಾಲಾಲ ಬದ್ದಿ, ರಮೇಶ ಪೂಜಾರ ಸೇರಿದಂತೆ ನೂರಾರು ವ್ಯಾಪಾರಸ್ತರು ಭಾಗಿಯಾಗಿದ್ದರು.