ಬೆಂಗಳೂರು:ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಿಂದಾಲ್ಗೆ ಭೂಮಿ ಪರಾಭಾರೆ ಮಾಡಿರುವ ಬಗ್ಗೆ ಸುದೀರ್ಘ ಚರ್ಚೆ ನಡೆದಿದ್ದು, ಹಲವು ಸಂಪುಟ ಸಚಿವರು ಸಂಪುಟ ಉಪಸಮಿತಿ ರಚನೆ ಬೇಡ ಎಂಬ ಅಭಿಮತ ವ್ಯಕ್ತಪಡಿಸಿದರು.
ಒಂದು ವೇಳೆ ಜಿಂದಾಲ್ಗೆ ಭೂಮಿ ಪರಾಭಾರೆ ಮಾಡಿರುವ ನಿರ್ಣಯವನ್ನು ಕೈ ಬಿಟ್ಟರೆ, ಕೈಗಾರಿಕೋದ್ಯಮಿಗಳಿಗೆ ತಪ್ಪು ಸಂದೇಶ ಹೋಗುತ್ತದೆ. ಈಗಾಗಲೇ ಹಲವು ಕೈಗಾರಿಕೋದ್ಯಮಿಗಳು ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ಪರಾಭಾರೆ ರದ್ದುಗೊಳಿಸಿದರೆ, ತಪ್ಪು ಸಂದೇಶ ಹೋಗುತ್ತದೆ ಎಂದು ಹಲವು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಮುಖವಾಗಿ ಸಚಿವ ಆರ್.ವಿ. ದೇಶಪಾಂಡೆ, ಸಚಿವ ಡಿ.ಕೆ. ಶಿವಕುಮಾರ್, ಕೃಷ್ಣ ಭೈರೇಗೌಡ ಸೇರಿದಂತೆ ಹಲವರು ಉಪಸಮಿತಿ ರಚನೆಗೂ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿಎಂ ಕೂಡ ಉಪಸಮಿತಿ ರಚನೆ ಸಂಬಂಧ ಒಲವು ಹೊಂದಿಲ್ಲ ಎನ್ನಲಾಗಿದೆ.
ಜಿಂದಾಲ್ ಗೆ ಭೂಮಿ ಪರಾಭಾರೆ ಮಾಡಿರುವ ಬಗ್ಗೆ ಸುದೀರ್ಘ ಚರ್ಚೆ ಕೊನೆಗೆ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಈಗಾಗಲೇ ಈ ಸಂಬಂಧ ಸಾರ್ವಜನಿಕ ವಲಯದಲ್ಲಿ ಗೊಂದಲ ಉಂಟಾಗಿದೆ. ಹೀಗಾಗಿ ಸಂಪುಟ ಉಪ ಸಮಿತಿ ರಚಿಸುವುದು ಒಳಿತು ಎಂದು ಒತ್ತಾಯಿಸಿದ್ದಾರೆ. ಕೊನೆಗೆ ಉಪ ಸಮಿತಿ ರಚನೆಗೆ ನಿರ್ಣಯಿಸಲಾಯಿತು. ವರದಿ ಬಂದ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಿದ್ದು, ಆದಷ್ಟು ಬೇಗ ವರದಿ ನೀಡಲು ಸೂಚನೆ ನೀಡಲಾಯಿತು.