ನಾಟಿಂಗ್ಹ್ಯಾಮ್:ನಿನ್ನೆ ಪಾಕಿಸ್ತಾನದ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮೂರು ವಿಕೆಟ್ಗಳ ಭರ್ಜರಿ ಗೆಲುವು ದಾಖಲು ಮಾಡಿದ್ದು, ಸರಣಿಯಲ್ಲಿ 3-0 ಅಂತರದ ಮುನ್ನಡೆ ಪಡೆದುಕೊಂಡಿದೆ.
ಪಾಕ್ ನೀಡಿದ್ದ 341ರನ್ಗಳ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಜೇಸನ್ ರಾಯ್ ಭರ್ಜರಿ ಶತಕ(114ರನ್) ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದರಲ್ಲೇನು ವಿಶೇಷ ಎಂದು ನೀವೂ ಅಂದುಕೊಳ್ತಿರಬಹುದು.ಪಂದ್ಯ ಆರಂಭಗೊಳ್ಳುವುದಕ್ಕೂ ಮೊದಲು ಇಂಗ್ಲೆಂಡ್ ತಂಡದ ಆರಂಭಿಕ ಬರೋಬ್ಬರಿ 7ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಕಳೆದಿದ್ದಾರೆ.
ಮಗಳು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಪತ್ನಿ ಜತೆ ಸೇರಿ ಮಗಳನ್ನ ಮಧ್ಯರಾತ್ರಿ 1:30ಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋದ ರಾಯ್ ಬೆಳಗ್ಗೆ 8:30ರವರೆಗೂ ಆಕೆಯೊಂದಿಗೆ ಆಸ್ಪತ್ರೆಯಲ್ಲೇ ಕಾಲ ಕಳೆದಿದ್ದಾರೆ. ತದನಂತರ ತಂಡ ಸೇರಿಕೊಂಡ ರಾಯ್ ಕೇವಲ ಕೆಲ ನಿಮಿಷಗಳ ಕಾಲ ಅಭ್ಯಾಸದಲ್ಲಿ ಭಾಗಿಯಾಗಿ ನೇರವಾಗಿ ಮೈದಾನಕ್ಕಿಳಿದಿದ್ದರು. ಜತೆಗೆ ಈ ಪಂದ್ಯದಲ್ಲಿ ಬರೋಬ್ಬರಿ 114ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಇದೇ ವಿಷಯವನ್ನ ರಾಯ್ ಪಂದ್ಯ ಗೆದ್ದ ಬಳಿಕ ಬಿಬಿಸಿ ರೆಡಿಯೋ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಮಗಳಿಗೆ ಏಕಾಏಕಿ ಜ್ವರ ಕಾಣಿಸಿಕೊಂಡ ಕಾರಣ ರಾತ್ರಿ 1:30ರ ವೇಳೆಗೆ ಆಕೆಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಯಿತು. ಅಲ್ಲಿ ಬೆಳಗ್ಗೆ 8:30ವರೆಗೆ ಕಾಲ ಕಳೆದೆವು. ಆ ಮೇಲೆ ಮೈದಾನಕ್ಕೆ ಬಂದು ತಂಡ ಸೇರಿಕೊಂಡಿರುವೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಈ ಪಂದ್ಯ ನನಗೆ ಹಾಗೂ ನನ್ನ ಕುಟುಂಬಕ್ಕೆ ತುಂಬಾ ವಿಶೇಷವಾಗಿತ್ತು ಎಂದೂ ಅವರು ಹೇಳಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ರಾಯ್ 'ಮ್ಯಾನ್ ಆಫ್ ದಿ ಮ್ಯಾಚ್' ಪ್ರಶಸ್ತಿಗೂ ಭಾಜನರಾಗಿದ್ದಾರೆ.