ಕರ್ನಾಟಕ

karnataka

By

Published : May 11, 2019, 7:08 PM IST

ETV Bharat / briefs

ಕುಂದಾನಗರಿ ರಾಜಕಾರಣದಲ್ಲಿ ದಿನಕ್ಕೊಂದು ತಿರುವು: ಕುತೂಹಲ ಮೂಡಿಸಿದ ಜಾರಕಿಹೊಳಿ ಸಹೋದರರ ನಡೆ!

ಬಾಲಚಂದ್ರ ಜಾರಕಿಹೊಳಿ ಹಾಗೂ ರಮೇಶ್​ ಜಾರಕಿಹೊಳಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ರಾಜಕಾರಣದಲ್ಲಿನ ಬದಲಾವಣೆ ಮನ್ಸೂಚನೆ ನೀಡಿದೆಯಾ ಎಂಬ ಮಾತುಗಳು ಕೇಳಿಬರುತ್ತಿವೆ.

ಜಾರಕಿಹೊಳಿ

ಬೆಳಗಾವಿ: ಕುಂದಾನಗರಿ ರಾಜಕಾರಣ ದಿನಕ್ಕೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ನಿನ್ನೆ ನಡೆದ ಕೆಎಂಎಫ್ ಚುನಾವಣೆಯಲ್ಲಿ ಮಾಜಿ ಸಚಿವರಾದ ರಮೇಶ್​ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಯಿತು. ಸಾಲದೆಂಬಂತೆ ಅದೇ ಹೋಟೆಲ್​ನಲ್ಲಿ ಸಚಿವ ಸತೀಶ್​ ಜಾರಕಿಹೊಳಿ ಅವರ ವಿರೋಧಿಗಳ ಜತೆಗೆ ರಮೇಶ್​ ಗೌಪ್ಯ ಸಭೆ ನಡೆಸಿದ್ದಾರೆ ಎನ್ನಲಾಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಹೌದು, ಕಳೆದ 3 ತಿಂಗಳಿನಿಂದ ಜಾರಕಿಹೊಳಿ ಹಿರಿಯ ಸಹೋದರರ ನಡುವೆ ಹೇಳಿಕೆ-ಪ್ರತಿಹೇಳಿಕೆ, ವಾದ-ವಾಗ್ವಾದ ತಾರಕಕ್ಕೇರುತ್ತಿವೆ. ಹಿರಿಯ ಸಹೋದರರ ನಡುವಿನ ಬಿಕ್ಕಟ್ಟನ್ನು ಸಂಧಾನದ ಮೂಲಕ ಶಮನ ಮಾಡುತ್ತೇನೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳುತ್ತಲೇ ಇದ್ದಾರೆ. ಆದರೆ ಈವರೆಗೆ ಸಹೋದರರ ಮಧ್ಯೆ ಇರುವ ಭಿನ್ನಾಭಿಪ್ರಾಯ ಶಮನಕ್ಕೆ ಬಾಲಚಂದ್ರ ಜಾರಕಿಹೊಳಿ ಮುಂದಾಗುತ್ತಿಲ್ಲ. ಈ ಮಧ್ಯೆ ಬಾಲಚಂದ್ರ ಜಾರಕಿಹೊಳಿ ಹಾಗೂ ರಮೇಶ್​ ಜಾರಕಿಹೊಳಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ರಾಜಕಾರಣದಲ್ಲಿನ ಬದಲಾವಣೆ ಮನ್ಸೂಚನೆ ನೀಡಿದೆಯಾ ಎಂಬ ಮಾತುಗಳು ಕೇಳಿಬರುತ್ತಿವೆ.

ಅಲ್ಲದೇ ತನ್ನ ಆಪ್ತ ವಿವೇಕರಾವ್ ಪಾಟೀಲ್​ಗೆ ಮತ್ತೊಂದು ಅವಧಿಗೆ ಕೆಎಂಎಫ್‌ ‌ಅಧ್ಯಕ್ಷ ಸ್ಥಾನ ಕೊಡಿಸುವಲ್ಲಿಯೂ ರಮೇಶ್​ ಯಶಸ್ವಿಯಾಗಿದ್ದಾರೆ. ತಾಂತ್ರಿಕವಾಗಿ ಕಾಂಗ್ರೆಸ್​​ನಲ್ಲಿದ್ದರೂ ಲೋಕಸಭೆ ಚುನಾವಣೆಯಲ್ಲಿ ರಮೇಶ್​ ಜಾರಕಿಹೊಳಿ ಕಾಂಗ್ರೆಸ್ ವಿರುದ್ಧ ಚಟುವಟಿಕೆ ನಡೆಸಿತ್ತಿದ್ದಾರೆ ಎಂದು ಹೇಳಲಾಗ್ತಿದೆ. ರಮೇಶ್​ ತಂತ್ರಕ್ಕೆ ಪ್ರತಿತಂತ್ರ ಹೆಣೆದ ಸಚಿವ ಸತೀಶ್​ ಜಾರಕಿಹೊಳಿ ಗೋಕಾಕ ಕ್ಷೇತ್ರದ ಉಸ್ತುವಾರಿಯನ್ನು ಲಖನ್‍ಗೆ ವಹಿಸಿದ್ದಾರೆ. ಸಿದ್ದರಾಮಯ್ಯನವರನ್ನು ಗೋಕಾಕಿಗೆ ಆಹ್ವಾನಿಸಿ ಕಾರ್ಯಕರ್ತರ ಸಭೆ ನಡೆಸಿ ಶಕ್ತಿ ಪ್ರದರ್ಶಿಸಿದರು ಎನ್ನಲಾಗಿದೆ.

ಗೋಕಾಕಿನಲ್ಲಿ ಮುಂದೆ ಉಪಚುನಾವಣೆ ನಡೆದರೆ ಲಖನ್ ಜಾರಕಿಹೊಳಿಯೇ ಕಾಂಗ್ರೆಸ್ ಅಭ್ಯರ್ಥಿ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಸಿದ್ದರಾಮಯ್ಯನವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಸತೀಶ ಜಾರಕಿಹೊಳಿ ಹೇಳಿಕೆ ನೀಡಿದ್ದು ಇನ್ನಷ್ಟು ಪುಷ್ಠಿ ನೀಡಿದೆ. ವಿಶೇಷ ಅಂದ್ರೆ ಲೋಕಸಭೆ ಚುನಾವಣೆ ನಂತರ ಉದ್ಯಮಿ ಲಖನ್ ಜಾರಕಿಹೊಳಿ ಸಚಿವ ಸತೀಶ್​ ಜಾರಕಿಹೊಳಿ ಜೊತೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

ಪ್ರಚಾರದ ವೇಳೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದ ಸಚಿವ ಸತೀಶ್​ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿ ಚುನಾವಣೆ ಬಳಿಕ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇದೀಗ ಬಾಲಚಂದ್ರ ಜಾರಕಿಹೊಳಿ ಹಾಗೂ ರಮೇಶ್​ ಜಾರಕಿಹೊಳಿ ಕೆಎಂಎಫ್ ಚುನಾವಣೆ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಹಾಗೂ ಸತೀಶ್​ ಜತೆಗೆ ಲಖನ್ ಅಂತರ ಕಾಯ್ದುಕೊಳ್ಳುತ್ತಿರುವುದು ರಮೇಶ್​ ಜಾರಕಿಹೊಳಿ ಕೈ ಮೇಲಾಗಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ. ಮಧ್ಯಂತರ ಚುನಾವಣೆಯಲ್ಲಿ ಗೋಕಾಕಿನಿಂದ ಸ್ಪರ್ಧಿಸಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯವಕನಮರಡಿ ಕ್ಷೇತ್ರದಿಂದ ಕಣಕ್ಕಿಳಿಯುತ್ತೇನೆ ಎಂದಿದ್ದ ರಮೇಶ್​ ಜಾರಕಿಹೊಳಿ ಈಗಿನಿಂದಲೇ ಸಿದ್ಧತೆಯಲ್ಲಿ ತೊಡಗಿದ್ದಾರೆ ಎನ್ನಲಾಗ್ತಿದೆ.

For All Latest Updates

TAGGED:

ABOUT THE AUTHOR

...view details