ಮುಂಬೈ :ಭಾರತದ ತಂಡದ ಉಪನಾಯಕ ಹಾಗೂ ಹಿರಿಯ ಆಟಗಾರನಾಗಿ ನಾನು ನಾಯಕ ವಿರಾಟ್ ಕೊಹ್ಲಿಯ ಬೆನ್ನಿಗೆ ನಿಂತು ಸಲಹೆ ಸೂಚನೆಗಳನ್ನು ನೀಡುತ್ತೇನೆ. ಇದು ನನ್ನ ಜವಾಬ್ದಾರಿ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.
ಕಳೆದ 11 ವರ್ಷಗಳಿಂದ ಭಾರತ ಕ್ರಿಕೆಟ್ ತಂಡದಲ್ಲಿ ಖಾಯಂ ಸದಸ್ಯನಾಗಿರುವ ಹಿಟ್ಮ್ಯಾನ್ ರೋಹಿತ್ ಶರ್ಮಾ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅಲ್ಲದೆ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದ ನಾಯಕನಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ.
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವರೋಹಿತ್ ಶರ್ಮಾ, 'ನಾನೊಬ್ಬ ಉಪನಾಯಕನಾಗಿ, ವಿರಾಟ್ ಕೊಹ್ಲಿ ಬೆನ್ನ ಹಿಂದೆ ನಿಂತು ತಂಡದ ಹಿತ ಕಾಯುವುದು ನನ್ನ ಜವಾಬ್ದಾರಿ. ಕಳೆದ ಕೆಲವು ವರ್ಷಗಳಿಂದ ನಾವು ಇದನ್ನು ಉತ್ತಮವಾಗಿ ನಿರ್ವಹಿಸಿಕೊಂಡು ಬಂದಿದ್ದೇವೆ.
ಎಂಎಸ್ ಧೋನಿ ನಾಯಕನಾಗಿದ್ದಾಗ ಹಿರಿಯ ಆಟಗಾರರಾಗಿದ್ದ ಸಚಿನ್, ಸೆಹ್ವಾಗ್ ಸೇರಿದಂತೆ ಇನ್ನಿತರೆ ಹಿರಿಯ ಆಟಗಾರರು ಧೋನಿಗೆ ಸೂಕ್ತ ಸಂದರ್ಭಗಳಲ್ಲಿ ಸಲಹೆಗಳನ್ನು ನೀಡುತ್ತಿದ್ದರು. ಇದೀಗ ಕೊಹ್ಲಿಗೆ ನಾನೊಬ್ಬ ಹಿರಿಯ ಆಟಗಾರನಾಗಿ ತಂಡಕ್ಕೆ ಅನುಕೂಲವಾಗುವ ಸಲಹೆ ಸೂಚನೆ ನೀಡುತ್ತೇನೆ, ಕೊಹ್ಲಿ ಕೂಡ ನನ್ನ ಸಲಹೆಗಳನ್ನು ಸದಾ ಖುಷಿಯಿಂದಲೇ ಸ್ವೀಕರಿಸುತ್ತಾರೆ ಎಂದು ತಿಳಿಸಿದ್ದಾರೆ.
ಕೊಹ್ಲಿ ಕೂಡ ಇದೇ ಮಾತನ್ನ ಹೇಳಿದ್ದು, ತಂಡ ಮೈದಾನದಲ್ಲಿದ್ದಾಗ ಎದುರಾಳಿಗಳ ವಿರುದ್ಧ ತಂತ್ರ ರೂಪಿಸಲು ನನಗೆ ಭಾರತದ ಇಬ್ಬರು ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಮಹಿ ಭಾಯ್ ನನ್ನ ಜೊತೆ ಇರುತ್ತಾರೆ ಎಂದು ತಿಳಿಸಿದ್ದರು.