ನ್ಯೂಯಾರ್ಕ್: ಜಾಗತಿಕ ಉಗ್ರರ ಪಟ್ಟಿಗೆ ಪಾಕಿಸ್ತಾನದ ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್ ಹೆಸರು ಸೇರಿಸಲು ಡ್ರಾಗನ್ ಖ್ಯಾತಿಯ ಚೀನಾ ಬರೋಬ್ಬರಿ 10ವರ್ಷಗಳ ಕಾಲ ಅಡ್ಡಗಾಲು ಹಾಕಿತ್ತು.
ಈಗ ಅಂತಾರಾಷ್ಟ್ರೀಯ ಒತ್ತಡ, ಭಾರತದ ಸತತ ಪರಿಶ್ರಮ, ಅಮೆರಿಕಾ, ಇಂಗ್ಲೆಂಡ್, ಫ್ರಾನ್ಸ್ಗಳ ಒತ್ತಾಸೆಯಿಂದಾಗಿ ಚೀನಾ ಕೊನೆಗೂ ಅಜರ್ ಪಟ್ಟಿಗೆ ಸೇರಿಸಲು ಒಪ್ಪಿಕೊಂಡಿತ್ತು. ಚೀನಾದ ಒಪ್ಪಿಗೆ ಸಿಗುತ್ತಿದ್ದಂತೆಯೇ ವಿಶ್ವಸಂಸ್ಥೆ ನಿನ್ನೆ ಮೌಲಾನಾ ಮಸೂದ್ ಅಜರ್ ಜಾಗತಿಕ ಉಗ್ರ ಎಂಬ ಘೋಷಣೆಯನ್ನೂ ಹೊರಡಿಸಿತ್ತು.
ಈ ಮಧ್ಯೆ ಚೀನಾವನ್ನ ಬಗ್ಗಿಸಿದ್ದು ಯಾರು ಎಂಬ ಚರ್ಚೆ ವಿಶ್ವದಾದ್ಯಂತ ಶುರುವಾಗಿದೆ. ಇದರ ಲಾಭ ಪಡೆಯಲು ನಾ ಮುಂದು ತಾ ಮುಂದು ಎಂಬ ಮೇಲಾಟ ಶುರುವಾಗಿದೆ. ಈ ಸಂಬಂಧ ಹೇಳಿಕೆ ನೀಡಿರುವ ಅಮೆರಿಕಾ ವಿದೇಶಾಂಗ ಸಚಿವ ಮೈಕ್ ಪಾಂಪಿಯೋ ಇದು ಅಮೆರಿಕ ರಾಜತಾಂತ್ರಿಕ ಪ್ರಯತ್ನಕ್ಕೆ ಸಂದ ಗೆಲುವು ಎಂದು ಘೋಷಿಸಿಕೊಂಡಿದ್ದಾರೆ. ಇದೇ ವೇಳೆ, ಭಯೋತ್ಪಾದನೆ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯ ನಡೆಸುತ್ತಿರುವ ಹೋರಾಟದ ಜಯ ಎಂದೂ ವ್ಯಾಖ್ಯಾನಿಸಿದ್ದಾರೆ.
ಚೀನಾ ಒಪ್ಪಿದ್ದೇಕೆ ಮತ್ತು ಹೇಗೆ?
ಮೇ 1 ರಂದು ಇಸ್ಲಾಮಿಕ್ ಸ್ಟೇಟ್( ಇಸಿಸ್) ಹಾಗೂ ಅಲ್ ಕ್ವೆದಾ ದೊಂದಿಗೆ ಜೆಇಎಂ ಮುಖಂಡ ಮಸೂದ್ ಅಜರ್ ಒಪ್ಪಂದ ಮಾಡಿಕೊಂಡಿರುವುದಾಗಿ ಘೋಷಿಸಿತ್ತು. ಇನ್ನೊಂದೆಡೆ ಪುಲ್ವಾಮ ಘಟನೆಯ ಹೊಣೆಯನ್ನ ಮಸೂದ್ ಅಜರ್ ಸಂಘಟನೆ ಜೆಇಎಂ ಹೊತ್ತುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವಣ ಸಂಬಂಧಗಳು ಬಿಗಡಾಯಿಸಿದ್ದವು. ಪರಸ್ಪರ ದೇಶಗಳಲ್ಲಿ ಯುದ್ಧದ ಕಾರ್ಮೋಡವು ತಲೆದೋರಿತ್ತು.
ಮತ್ತೊಂದು ಕಡೆ ಭಾರತ ಸರ್ಕಾರ ಚೀನಾಕ್ಕೆ ಮಸೂದ್ ಅಜರ್ ಅವರ ಪಾತ್ರದ ಬಗ್ಗೆ ಎಲ್ಲ ದಾಖಲೆಗಳನ್ನ ಚೀನಾಕ್ಕೆ ನೀಡಿತ್ತು. ಈ ಸಂಬಂಧ ಭಾರತೀಯ ವಿದೇಶಾಂಗ ಇಲಾಖೆ ನಿರಂತರವಾಗಿ ಚೀನಾದೊಂದಿಗೆ ಮಾತುಕತೆ ನಡೆಸಿತ್ತು. ಹೀಗಾಗಿಯೇ ಚೀನಾ ಭಾರತದ ವಿದೇಶಾಂಗ ನೀತಿ ಹಾಗೂ ಅಮೆರಿಕ ಸೇರಿದಂತೆ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದಿತು ಎನ್ನಲಾಗುತ್ತಿದೆ.
ಈ ನಡುವೆ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ವೈಟ್ಹೌಸ್ ನ ರಾಷ್ಟ್ರೀಯ ಭದ್ರತಾ ಸಮಿತಿ, ಅಜರ್ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸುವ ಮೂಲಕ ಭಯೋತ್ಪಾದನೆ ನಿರ್ಮೂಲನೆಗೆ ಅನುಕೂಲವಾಗಿದ್ದು, ವಿಶ್ವಸಂಸ್ಥೆ ಕೈಗೊಂಡ ಕ್ರಮದಿಂದ ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗೆ ಅನುಕೂಲವಾಗಲಿದೆ ಎಂದಿದೆ.