ವಿಶಾಖಪಟ್ಟಣಂ: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕುರಿತು ತೀರ್ಮಾನ ಅಂತಿಮಗೊಳಿಸದ ಹಿನ್ನೆಲೆಯಲ್ಲಿ ಕೇಂದ್ರದ ವಿರುದ್ಧ ಧ್ವನಿ ಎತ್ತಿದ ಸಂಸದ, ತೆಲಗು ದೇಶಂ ಪಕ್ಷದ ನಾಯಕ ಗಲ್ಲ ಜಯದೇವ್ ಮನೆ ಮೇಲೆ ಮಂಗಳವಾರ ರಾತ್ರಿ ಐಟಿ ದಾಳಿ ನಡೆದಿದೆ.
ಉದ್ಯಮಿಯೂ ಆಗಿರುವ ಗಲ್ಲ ಅವರ ಮನೆ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ತಮ್ಮ ನಾಯಕನ ಮನೆ ಮೇಲೆ ಐಟಿ ದಾಳಿ ನಡೆದಿರುವ ಬಗ್ಗೆ ಕೆಂಡಾಮಂಡಲವಾಗಿರುವ ಟಿಡಿಪಿ ನಮ್ಮನ್ನೇ ಏಕೆ ಗುರಿಯಾಗಿಸಿಕೊಂಡು ಐಟಿ ದಾಳಿ ನಡೆಸಲಾಗುತ್ತಿದೆ? ಚುನಾವಣಾ ಆಯೋಗ ಇದನ್ನು ಪ್ರಶ್ನಿಸುವುದಿಲ್ಲವೇ ಎಂದು ಕೇಳಿದೆ.
ಮಂಗಳವಾರ ರಾತ್ರಿ ದಾಳಿ ನಡೆದ ಬೆನ್ನಿಗೇ ಬೆಂಬಲಿಗರೊಂದಿಗೆ ಖುದ್ದು ಸಂಸದರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಮೋದಿ ಅವರ ಕಟು ಟೀಕಾಕಾರನಾಗಿರುವ ಕಾರಣ ಗಲ್ಲ ಅವರ ಮನೆ ಮೇಲೆ ದಾಳಿ ನಡೆದಿದೆ. ಅವರು ಆಂಧ್ರಪ್ರದೇಶದ ಅತಿ ಹೆಚ್ಚು ತೆರಿಗೆದಾರ ಎಂದು ಬೆಂಬಲಿಗರು ಹೇಳಿದ್ದಾರೆ.